• ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ “ಕಲಾಭಿಷೇಕ” • ಬಲ, ಅಸ್ತಿತ್ವ ದಾಖಲಿಸಿದ ಕಲಾವಿದೆಯರು
ಸ್ತ್ರೀ/ಮಹಿಳಾ ಚಳವಳಿ ಕುರಿತಾದ ಮಾಹಿತಿಗಾಗಿ ಲಭ್ಯವಾಗುವ ಅನೇಕ ಪುಸ್ತಕಗಳ ಪುಟಗಳನ್ನು ಮಗುಚುವಾಗಲೆಲ್ಲ 1970ರ ದಶಕದ ಒಂದಿಷ್ಟು ಗಂಭೀರ ಚಿಂತನೆಗಳು, ಎಚ್ಚರಿಸುವ ಸಿದ್ಧಾಂತಗಳು, ಮನಸ್ಸು ಬಿಗಿಗೊಳಿಸುವ ಬರಹಗಳು ಕಾಣಿಸುತ್ತವೆ. 1975ರ ಅಂತಾರಾಷ್ಟ್ರೀಯ ಮಹಿಳಾ ದಿನಾನಂತರದ ಧ್ವನಿ ಬಡಿದೆಚ್ಚರಿಸುವ ಕೆಲಸ ಮಾಡಿದವೇನೋ ಅನಿಸುತ್ತವೆ. ಕನ್ನಡದ ಸಾಹಿತ್ಯದಲ್ಲಿ ಮಹಿಳಾ ಪರ ಧ್ವನಿ, ಸ್ತ್ರೀವಾದಗಳು ಶರವೇಗದಲ್ಲೆ ತೆರೆದುಕೊಳ್ಳುತ್ತಾ ಹೋದವು ಎನ್ನುವುದು ಗಮನಾರ್ಹವಾದ ಸಂಗತಿ. ಎಂಭತ್ತರ ದಶಕದಲ್ಲಿ ಸ್ತ್ರೀವಾದದ ಪ್ರಭಾವ, ಪ್ರಖರತೆ ತುಸು ಜಾಸ್ತಿಯೇ ಆಯಿತು.
ಆ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳ ಹೊರಟ ಅನೇಕರು ಸ್ತ್ರೀ ಶೋಷಣೆ, ಮಹಿಳಾ ಸಂವೇದನೆ ವಿಚಾರಗಳನ್ನೇ ಪ್ರಮುಖ ವಿಚಾರವಾಗಿಸಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಇದೇ ಮುಂದೆ ಬಂಡಾಯವಾಗಿಯೂ, ನವ್ಯ, ನವೋದಯವಾಗಿಯೂ, ಪ್ರಗತಿಪರ ಸಿದ್ಧಾಂತವಾಗಿಯೂ, ವಿಡಂಬನಾತ್ಮಕವಾಗಿಯೂ ವಿಸ್ತ್ರತವಾಗತೊಡಗಿದ್ದನ್ನು ಕಂಡಿದ್ದೇವೆ. ಈ ಪುರುಷ ಪ್ರಧಾನ ಸಮಾಜದಲ್ಲಿ ತನಗಾಗುತ್ತಿರುವ ಅನ್ಯಾಯಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಿರುವುದನ್ನು ಮಹಿಳೆ ನಾನಾ ರೀತಿಯಲ್ಲಿ ಅಭಿವ್ಯಕ್ತಿಸುವ ಧೈರ್ಯ ಕಂಡಳು.
ಈಗ ಕಾಲ ಬದಲಾಗಿದೆ. ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳತೊಡಗಿದ್ದಾಳೆ. ಅಡುಗೆ ಮನೆಯಲ್ಲೇ ಇರಬೇಕಾದವಳು ಅನ್ನೋದನ್ನು ಸುಳ್ಳುಮಾಡಿದ್ದಾಳೆ. ಯೋಧೆಯಾಗಿ ದೇಶ ಕಾಯುತ್ತಿದ್ದಾಳೆ, ಬಾಹ್ಯಾಕಾಶದಲ್ಲೂ ಕಾಣಿಸಿಕೊಂಡಿದ್ದಾಳೆ, ಕಂಪನಿ ಒಡತಿಯೂ ಆಗಿದ್ದಾಳೆ, ಆಡಳಿತಕ್ಕೂ ಸೈ ಎನಿಸಿಕೊಂಡಿದ್ದಾಳೆ, ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುತ್ತಿದ್ದಾಳೆ. ಅಂತೆಯೇ ಕಲಾವಿದೆಯಾಗಿ ಅದೆಷ್ಟೋ ತನಗೆದುರಾಗುವ ಗೋಡೆಗಳನ್ನು ಛೇದಿಸಿ ಹೊರಬಂದು ಎಲ್ಲಾ ಬಗೆಯ ಅಭಿವ್ಯಕ್ತಿ ಮಾಧ್ಯಮಕ್ಕೂ ತೆರೆದುಕೊಳ್ಳುತ್ತಿದ್ದಾಳೆ.
| ಕಲಾವಿದೆಯರ ಅಂತರಾಳದ ಧ್ವನಿ |
ಇದಕ್ಕೆ ಸಾಕ್ಷಿ ಎನ್ನುವಂತಹ ಕಲಾಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಗಳಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day) ಹಿನ್ನೆಲೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿದೆ. ವೃತ್ತಿಪರ ಕಲಾವಿದೆಯರು (professionals), Self-taught ಕಲಾವಿದೆಯರ 400ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.
ಪುರುಷ ಪ್ರಧಾನ ಸಮಾಜ ಇನ್ನೂ ಉಳಿದಿದ್ದರೆ ಈ ಕಲಾಪ್ರದರ್ಶನ ಒಂದು ಗಟ್ಟಿಯಾದ ಧ್ವನಿ ಎತ್ತಿದೆ. ಹೆಣ್ಣು ಈಗ ಪುರುಷನಿಗೆ ಸಮಾನಾಂತರವಾಗಿ ಬೆಳೆದಿದ್ದಾಳೆ, ಬೆಳೆಯುತ್ತಿದ್ದಾಳೆ, ಚಿಂತಿಸುತ್ತಿದ್ದಾಳೆ ಎನ್ನುವ ಸಂದೇಶ ರವಾನಿಸಿದೆ. ಅನೇಕ ಉತ್ತಮ ಕಲಾಕೃತಿಗಳು ಪ್ರದರ್ಶನದಲ್ಲಿ ಇರುವುದು ಸಮುದಾಯದ ಬೆಳವಣಿಗೆ ದೃಷ್ಟಿಯಿಂದ ಅತ್ಯಗತ್ಯವಾದುದ್ದೆ. ಆದರೆ, ಈಗಾಗಲೇ ಈ ಕ್ಷೇತ್ರದಲ್ಲಿ ಮೇರು ಮಟ್ಟದ ಸಾಧನೆ ಮಾಡಿರುವ ಕಲಾವಿದೆಯರೂ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವ ಆಸಕ್ತಿ ತೋರಬೇಕಿತ್ತು.
ಅನೇಕ ಯುವ ವೃತ್ತಿಪರ ಕಲಾವಿದೆಯರ ಕಲಾಕೃತಿಗಳು ಭವಿಷ್ಯದಲ್ಲಿ ಒಂದು ಪರಿಣಾಮಕಾರಿ ಕಲಾವಿದೆಯಾಗಿ ಬೆಳೆಯಬಲ್ಲರು ಎನ್ನುವ ವಿಶ್ವಾಸ ಮೂಡಿಸುವಂತಿದೆ. ಆಯ್ದುಕೊಳ್ಳಬಹುದಾದ ಒಂದಿಷ್ಟು ವರ್ಣಚಿತ್ರಗಳು, ಶಿಲ್ಪಗಳು, ಪ್ರತಿಷ್ಠಾಪನಾ ಶಿಲ್ಪಗಳು, ಮುದ್ರಣ ಕಲಾಕೃತಿಗಳು ಇದಕ್ಕೆ ಸಾಕ್ಷಿಯಾಗಬಲ್ಲವು. ವೃತ್ತಿಪರರು ತಮ್ಮ ಕಲಾಕೃತಿಗಳ ಗುಣಮಟ್ಟ ಹೆಚ್ಚಿಸಿಕೊಳ್ಳಲು, ಹವ್ಯಾಸಿಗಳು ವೃತ್ತಿಪರರ ಕಲಾಕೃತಿಗಳಿಂದ ಸ್ಫೂರ್ತಿ ಪಡೆದುಕೊಳ್ಳಲು ಈ ಪ್ರದರ್ಶನ ವೇದಿಕೆಯೂ ಆಗಬಹುದಾಗಿದೆ. ಅನೇಕರಲ್ಲಿರುವ ಗೊಂದಲಗಳೂ ನಿವಾರಣೆ ಆಗಬಲ್ಲ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಸ್ನೇಹಿತರೇ, ಈ ಕಲಾಪ್ರದರ್ಶನ ಜನವರಿ 12ರಂದು ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ. ಕಲಾಕೃತಿ ಪ್ರದರ್ಶಿಸಿದ ಎಲ್ಲಾ ಕಲಾವಿದೆಯರಿಗೂ ಅಭಿನಂದನೆಗಳು