” ಹರಿಪುರ “!! ಗುಜರಾತ್‌ನ ಒಂದು ಹಳ್ಳಿ. ಚಿತ್ರಕಲಾ ಕ್ಷೇತ್ರದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ನಂದಲಾಲ್ ಬೋಸ್(Nandalal Bose), ಆ ದಿನಗಳಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧಿ ಅವರ ನಂಟು ಇರಿಸಿಕೊಂಡಿರುವ ಒಂದು ಹಳ್ಳಿ. ನಂದಲಾಲ್ ಬೋಸ್ ಅವರ ಜೀವನ ಚರಿತ್ರೆಯಲ್ಲಿ ” ಹರಿಪುರ ” ಹಳ್ಳಿ ಒಳಗೊಳ್ಳದೇ ಇದ್ದರೆ ಅದು ಅಪೂರ್ಣ ಎಂದೇ ಹೇಳಬಹುದಾದ ನಂಟು ಎನ್ನಬಹುದು. ಅಷ್ಟರ ಮಟ್ಟಿಗೆ ಆ ಹಳ್ಳಿಯ ನಂಟಿದೆ ನಂದಲಾಲ್ ಬೋಸ್ ಅವರಿಗೆ…
1938ರಲ್ಲಿ ಮಹಾತ್ಮ ಗಾಂಧೀಜಿ ಅವರು ಹರಿಪುರದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ವಾರ್ಷಿಕ ಅಧಿವೇಶನಕ್ಕೆ ನಂದಲಾಲ್ ಅವರನ್ನು ಆಹ್ವಾನಿಸಿದ್ದರು. ಅಧಿವೇಶನ ಗಮನ ಸೆಳೆಯುವಂತೆ ಮಾಡಬೇಕೆನ್ನುವ ಕಾರಣಕ್ಕಾಗಿ ಅಲಂಕಾರಿಕ ಚಿತ್ರಗಳ ಸಂದೇಶ ಪಟ (Posters) ರಚನೆಯ ಅಗತ್ಯತೆ ಇತ್ತು. ಈ ಜವಾಬ್ದಾರಿಯನ್ನು ಗಾಂಧೀಜಿ ಅವರು ನಂದಲಾಲ್ ಬೋಸ್ ಅವರಿಗೆ ವಹಿಸಿದ್ದರು. ಈ ಅಧಿವೇಶನ ಸುಭಾಸ್ ಚಂದ್ರ ಬೋಸ್ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ ನಂದಲಾಲ್ ಬೋಸ್ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ವರ್ಣಗಳನ್ನೇ ಬಳಸಿಕೊಂಡರು. ಅಂದು ನಂದಲಾಲ್ ಬೋಸ್ ಅವರಿಂದ ರಚಿಸಲ್ಪಟ್ಟ ಚಿತ್ರಗಳು ಕೇವಲ ಚಿತ್ರಗಳಾಗಿರಲಿಲ್ಲ. ಪೌರಾಣಿಕ ಸನ್ನಿವೇಶ ಹಾಗೂ ಭಾರತೀಯ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸರಣಿ ಕಲಾಕೃತಿಗಳಾಗಿದ್ದವು. ಈ ಕಲಾಕೃತಿಗಳು ಅಂದಿನ ಅಧಿವೇಶನದ ಪ್ರಮುಖ ಆಕರ್ಷಣೆಯಾಗಿ ಜನಪ್ರಿಯವಾಗಿದ್ದವು. ಐತಿಹಾಸಿಕ ಪುಟಗಳಲ್ಲಿ ಈ ಚಿತ್ರಗಳು “ಹರಿಪುರ ಪೋಸ್ಟರ್” ಗಳೆಂದೇ ಖ್ಯಾತಿಯಾಗಿವೆ.
ಹಾಗಾದರೆ “ಹರಿಪುರ ಪೋಸ್ಟರ್”ಗಳು ಹೇಗಿದ್ದವು? ಈಗಲೂ ನೋಡಲು ಲಭ್ಯವೇ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ಖಂಡಿತಾ ಕಣ್ತುಂಬಿಕೊಳ್ಳುವ ಒಂದು ಸುವರ್ಣಾವಕಾಶ ಕನ್ನಡಿಗರ ಮುಂದಿದೆ. ಬೆಂಗಳೂರಿನಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ತನ್ನದೇ ಸಂಗ್ರಹದಲ್ಲಿರುವ 70ಕ್ಕೂ ಹೆಚ್ಚು ಕಲಾಕೃತಿಗಳನ್ನು “ಹರಿಪುರ ಪ್ಯಾನಲ್ಸ್” ಶೀರ್ಷಿಕೆಯಡಿ ಪ್ರದರ್ಶಿಸಿದೆ.
ನಂದಲಾಲ್ ಬೋಸ್ ಅವರ ರೇಖೆಗಳಲ್ಲಿನ ಬೀಸು, ಶಾಂತ ಪ್ರತಿಬಿಂಬಿಸುವ ಬಣ್ಣಗಳ ಬಳಕೆ ಮತ್ತು ಸಂಯೋಜನಾ ಕ್ರಮ ಆಸಕ್ತಿ ಹುಟ್ಟಿಸುವಂತಿದೆ. ಹೆಚ್ಚಿನ ಮಾನವ ಆಕೃತಿಗಳಲ್ಲಿ ಉತ್ಪ್ರೇಕ್ಷಿತ ಲಕ್ಷಣಗಳನ್ನು ಗುರುತಿಸಬಹುದು. ವಿಶೇಷವಾಗಿ ಕಲಾವಿದ್ಯಾರ್ಥಿಗಳು ನೋಡಲೇಬೇಕಾದ ಕಲಾಕೃತಿಗಳು ಇವು. ಬಣ್ಣಗಳು ಮತ್ತು ರೇಖೆಗಳನ್ನು ಸರಳಗೊಳಿಸುವ ವಿಧಾನ ನೋಡಿದಷ್ಟು ಸಾಲದು ಎಂಬಂತಿವೆ.
ಭಾರತೀಯ ಗ್ರಾಮೀಣ ಭಾಗದ ಜನಜೀವನವನ್ನೇ ವಿಷಯವಾಗಿಸಿಕೊಂಡು ನಂದಲಾಲ್ ಬೋಸ್ ಅವರು ಈ ಕಲಾಕೃತಿಗಳನ್ನು ರಚಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ ನಂದಲಾಲ್ ಬೋಸ್ ಅವರು ಸುಮಾರು 400ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದರು ಎನ್ನಲಾಗಿದೆ. ಹರಿಪುರದ ವಿಠಲ ನಗರದಲ್ಲಿ ಅನೇಕ ದಿನಗಳ ಕಾಲ ವಾಸವಿದ್ದರಂತೆ. ಹೀಗಾಗಿ ಆ ಹಳ್ಳಿಯ ದಿನನಿತ್ಯದ ಚಟುವಟಿಕೆಗಳನ್ನೇ ವಸ್ತು ವಿಷಯವಾಗಿಸಿಕೊಂಡಿದ್ದಾರೆ. ಸಾಕು ಪ್ರಾಣಿಗಳ ಜೊತೆಗಿನ ಅನುಬಂಧ, ತಾಯಿ ಮತ್ತು ಮಗುವಿನ ಆರೈಕೆಯ ಕ್ಷಣಗಳು, ವಾದ್ಯ ವೃಂದ, ಕೃಷಿ ಕಾಯಕದಲ್ಲಿ ತೊಡಗಿರುವ ರೈತರು ಚಿತ್ರದಲ್ಲಿ ಸೆರೆಯಾಗಿದ್ದಾರೆ.
ಬಂಗಾಳ ಕಲಾಶಾಲೆಯಲ್ಲಿನ ಪ್ರಭಾವ ಈ ಚಿತ್ರಗಳಲ್ಲಿ ಇರುವುದನ್ನು ಗಮನಿಸಬಹುದಾಗಿದೆ. ಅಲ್ಲದೆ, ಒಡಿಶಾ ಭಾಗಗಳಲ್ಲಿರುವ ಪಟ ಚಿತ್ರಗಳಲ್ಲಿನ ಶೈಲಿ ಸೇರಿದಂತೆ ಇನ್ನೂ ಕೆಲ ಜಾನಪದ ಶೈಲಿಯ ಚಿತ್ರಗಳ ಪ್ರಭಾವವೂ ಇದೆ.