ರಸಮಯ ಕಲಾಕೃತಿಗಳ ವರ್ಣಾರಾಧನೆ!

Share This

• ” The Pollen Waits on Tiptoe…” ಪರಿಣಾಮಕಾರಿ ಕಲಾಪ್ರದರ್ಶನ !

ರಸ ಸಿದ್ಧಾಂತ“ವು ನಮ್ಮ ಭಾರತೀಯ ಕಾವ್ಯ ಮೀಮಾಂಸೆಯು ಜಾಗತಿಕ ಕಾವ್ಯ ಮೀಮಾಂಸೆಗೆ ನೀಡಿರುವ ವಿಶಿಷ್ಟ ಮತ್ತು ಅತ್ಯಂತ ಮಹತ್ವಪೂರ್ಣವಾದ ಕೊಡುಗೆ!
ಭರತ ಎಂಟು ರಸಗಳ ಕುರಿತು ನಾಟ್ಯಶಾಸ್ತ್ರದಲ್ಲಿ ಬಹಳ ಸೊಗಸಾಗಿ ವಿವರಿಸಿದ್ದಾನೆ. ಆ ನಂತರದ ದಿನಗಳಲ್ಲಿ “ಶಾಂತ” ಸೇರ್ಪಡೆಯಾಗಿ ನವರಸಗಳಾದವು. ಬಹಳ ಆಸಕ್ತಿದಾಯಕ ಸಂಗತಿ ಏನೆಂದರೆ ಈ ಒಂಭತ್ತು ರಸಗಳ ಪ್ರಸ್ತಾಪ ಸಾಮಾನ್ಯವಾಗಿ ಪ್ರದರ್ಶಕ ಕಲೆಗಳು ಮತ್ತು ಕಾವ್ಯದ ಸಂದರ್ಭದಲ್ಲಿ ಅತಿಹೆಚ್ಚು ಬಳಕೆ ಕಾಣುತ್ತೇವೆ. ಹೀಗಾಗಿ ನವರಸಗಳು ಮತ್ತು ಬಣ್ಣಗಳ ಕುರಿತಾಗಿ ಹೇಳುವ ಸಂದರ್ಭ ಬಂದಿರುವುದಿಲ್ಲ.
ಆದರೆ, ನವರಸಗಳು ಪ್ರತಿನಿಧಿಸುವ/ ಪ್ರತಿಬಿಂಬಿಸುವ ಬಣ್ಣಗಳ ಕುರಿತು ಪ್ರದರ್ಶಕ ಕಲೆಗಳ ಸಂದರ್ಭದಲ್ಲಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ಹೇಳದಿದ್ದಾಗ ನೋಡುಗ/ ವೀಕ್ಷಕ ಕೂಡ ಇದರಾಚೆ ಅನುಭವಿಸುವ, ಗ್ರಹಿಸಿ ಆನಂದಿಸಬಹುದಾದ ಅಪಾಯ ಇರುತ್ತದೆ. ಸಾಂಸ್ಕೃತಿಕವಾಗಿ ಆಗಬಹುದಾದ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವವರು ಯಾರು ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಹಾಗೆಯೇ ಬಣ್ಣಗಳಲ್ಲಿಯೇ ನವರಸಗಳನ್ನು ಕಾಣುವ ಸಂದರ್ಭದಲ್ಲಿಯೂ ನವವರ್ಣಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.
ವಿಷ್ಣು ಪ್ರಧಾನ ಶೃಂಗಾರ(love/beauty) ರಸ ಪ್ರಣಯ, ಪ್ರೀತಿ, ಆಕರ್ಷಣೆ ಪ್ರತಿನಿಧಿಸಿದಂತೆ ತಿಳಿ ಹಸಿರು(Light Green) ಬಣ್ಣವನ್ನು ಈ ಭಾವಾಭಿವ್ಯಕ್ಕಿಗೆ ಸೂಚಿಸಲಾಗಿದೆ. ಹಾಗೆ, ಶಿವ ಪ್ರಧಾನನಾದ ಹಾಸ್ಯ(laughter) ಬಿಳಿ(White) ಬಣ್ಣವನ್ನು, ಶಿವ ಪ್ರಧಾನ ರೌದ್ರ(anger) ಕೆಂಪು(Red) ಬಣ್ಣವನ್ನು, ಯಮ ಪ್ರಧಾನ ಕಾರುಣ್ಯ(sorrow) ಬೂದು(Gray) ಬಣ್ಣವನ್ನು, ಶಿವ ಪ್ರಧಾನ ಬಿಭತ್ಸ(disgust) ನೀಲಿ(Blue) ಬಣ್ಣವನ್ನು, ಯಮ ಪ್ರಧಾನ ಭಯಾನಕ(terror/fear) ಕಪ್ಪು ಬಣ್ಣವನ್ನು, ಇಂದ್ರ ದೇವ ಪ್ರಧಾನ ವೀರ(heroism/courage) ಕೇಸರಿ ಬಣ್ಣವನ್ನು, ಬ್ರಹ್ಮ ಪ್ರಧಾನ ಅದ್ಭುತ(surprise/wonder) ಹಳದಿ ಬಣ್ಣವನ್ನು, ವಿಷ್ಣು ಪ್ರಧಾನ ಶಾಂತ(peace or tranquillity) ಶಾಶ್ವತ ಬಿಳಿ ಬಣ್ಣವನ್ನು ಪ್ರತಿನಿಧಿಸಬಲ್ಲವು. ನವರಸಗಳ ಬಗ್ಗೆ ಹೇಳುವಾಗ, ಪ್ರಸ್ತುತಿಯ ಸಂದರ್ಭದಲ್ಲಿ ಈ ಬಣ್ಣಗಳೂ ಅಷ್ಟೇ ಪ್ರಾಮುಖ್ಯತೆ ಪಡೆದುಕೊಳ್ಳಲಿವೆ.
ಈ ಆಸಕ್ತಿದಾಯಕ ವಿಚಾರದ ಮೇಲೆ ಬೆಳಕು ಚೆಲ್ಲಬಹುದಾದ ಪ್ರಯತ್ನದ ” The Pollen Waits on Tiptoe…” ಸಮೂಹ ಕಲಾಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ 7 ಗ್ಯಾಲರಿಗಳಲ್ಲಿ ನಡೆಯುತ್ತಿದೆ. ಮಾನಸಾ ರಾಜ್ (Manasa Raj) ಅವರು ಕ್ಯುರೇಟ್ ಮಾಡಿರುವ ಈ ಪ್ರದರ್ಶನದಲ್ಲಿ 21 ಕಲಾವಿದರ ಕಲಾಕೃತಿಗಳು ಇವೆ.

 

| ಗಾಂಭೀರ್ಯತೆ ಉಳಿಸಿಕೊಂಡ ಕಲಾಪ್ರದರ್ಶನ |
ಅಕ್ಷರಶಃ ಸತ್ಯ, ವರ್ಷದ ಆರಂಭದ ಒಂದೊಳ್ಳೆಯ ಕಲಾಪ್ರದರ್ಶನ. ಈ ಕಾಲಘಟ್ಟದ ಕಲಾಚಿಂತನೆಗಳಿಗೆ ಸ್ಪಂದಿಸುವ, ಬುದ್ಧಿಮತ್ತೆಗೆ ಕೆಲಸ ಕೊಡಬಲ್ಲ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಗ್ಯಾಲರಿಯ ಶಿಸ್ತು (discipline) ಕಾಪಾಡಿಕೊಳ್ಳುವಲ್ಲಿ ಇಡೀ ತಂಡದ ಪ್ರಾಮಾಣಿಕ ಪ್ರಯತ್ನವಿದೆ. ವಸ್ತುಸಂಗ್ರಹಾಲಯದ ಗಾಂಭೀರ್ಯತೆ (The majesty of the museum), ಕಂಪನ(vibe) ಪ್ರದರ್ಶನದ ಮೌಲ್ಯ ಹೆಚ್ಚಿಸಿದೆ. ನಾಲ್ಕಾರು ಕಲಾಕೃತಿಗಳು ಚೌಕಟ್ಟು (frame) ಹೊಂದಿದ್ದರೆ ಬಹುಶಃ ಅದರ ಸೌಂದರ್ಯ ದ್ವಿಗುಣಗೊಳ್ಳಬಹುದಿತ್ತು. ಹಾಗಂತ ಚೌಕಟ್ಟು ಇರಲೇಬೇಕೆನ್ನುವ ಯಾವ ನಿಯಮವಿಲ್ಲ, ವಾದವೂ ಅಲ್ಲ. ಆದರೆ ಕೆಲ ಸಂದರ್ಭದಲ್ಲಿ ಅನಿವಾರ್ಯವಾಗಿ ಕಲಾಕೃತಿ ಪ್ರಾಮುಖ್ಯತೆ ಕಳೆದುಕೊಳ್ಳುವ ಅಪಾಯ ಕಾಣಿಸಿಬಿಡುತ್ತದೆ. ಈ ಕಾರಣಕ್ಕಾಗಿ ಕಟ್ಟು ಇದ್ದಿದ್ದರೆ ದುಬ್ಬಟ್ಟು ಮೌಲ್ಯ ಸಾದ್ಯವಿತ್ತು.
ಒಟ್ಟಾರೆ ಕಲಾಪ್ರದರ್ಶನ ನೋಡುಗರಲ್ಲಿ ಒಂದು ಹೊಸ ಆಯಾಮದ ವಿಭಿನ್ನ ಅಭಿರುಚಿ ನೀಡುವಂತಿದೆ. ಒಂದೆರಡು ಕಲಾಕೃತಿಗಳನ್ನು ಹೊರತುಪಡಿಸಿ ಪ್ರತಿಯೊಂದು ಕಲಾಕೃತಿಗಳ ಒಳನೋಟವು ವೀಕ್ಷಕನನ್ನು ಹಿಡಿದು ನಿಲ್ಲಿಸುತ್ತವೆ. ಪ್ರತಿಷ್ಠಾಪನಾ ಕಲಾಕೃತಿಗಳು (installations) ಗಮನ ಸೆಳೆಯುತ್ತವೆ.
ಆಧುನಿಕ ಕಲಾಸಂದರ್ಭದಲ್ಲಿ ಕೆಲವೊಂದು ಧೋರಣೆಗಳನ್ನು, ಅಲಿಖಿತ ನಿಯಮಗಳನ್ನು ಮುರಿದು ಅದರಾಚೆ ಬೇರೆಯದೇ ಆದ ಸೌಂದರ್ಯ, ಅರ್ಥ ಹೇಳಲು ಸಾಧ್ಯ ಎನ್ನುವುದನ್ನು ಹಾಗೂ ಸಾಧ್ಯತೆಯ ವಿಶಾಲತೆಯನ್ನು ಅಭಿವ್ಯಕ್ತಿಗೊಳಿಸುವ ಯಶಸ್ವಿ ಪ್ರಯತ್ನವನ್ನು ಈ ಪ್ರದರ್ಶನದಲ್ಲಿ ಕಲಾವಿದರು ಮಾಡಿದ್ದಾರೆ. ಖಡಾಖಂಡಿತವಾಗಿ ಈ ಪ್ರಯತ್ನ ಹೊಸ ಅಲೆಗೆ ದಾರಿ ಮಾಡಿಕೊಡಲಿದೆ.
| ಮಂಪರಿನಲ್ಲೂ ಕಂಪಿಸುವ ಕಲಾಕೃತಿಗಳು |
ಕೆಲವೊಮ್ಮೆ ಕೆಲವು ಕಲಾಕೃತಿಗಳು ನೋಡುಗನ ಮನ ಕೆಣಕುತ್ತಿರುತ್ತವೆ. ಇದನ್ನೇ ಆ ಕಲಾಕೃತಿಗಳ ಶಕ್ತಿ ಎಂದು ವ್ಯಾಖ್ಯಾನಿಸಬಹುದು. ಕಲಾಕೃತಿಯೊಂದರ ನೇರ ಪರಿಣಾಮವೇ ಇದಾಗಿರುತ್ತದೆ. ನಿರೀಕ್ಷೆಯೂ ಹೌದು.
    ಸೆಂಥಿಲ್ ಕುಮಾರ್ ಅವರ ‘ Place of spiritual peace ‘ ಶೀರ್ಷಿಕೆಯ ಕಲಾಕೃತಿ ಮೌನ ಆವರಿಸಿ ಪ್ರಶಾಂತದೆಡೆ ಕಡೆದೊಯ್ಯುವ ಹೊಸ ಮಾಧ್ಯಮದ ಪ್ರಯತ್ನವೆನಿಸಿತು. ಮೊಹಿತ್ ಮಹತೊ ಅವರ ‘ No (Sun)Day ‘ ಶೀರ್ಷಿಕೆಯ ಮುದ್ರಣ ಕಲಾಕೃತಿ ನಗರೀಕರಣ, ಆಧುನಿಕತೆಯ ಬೇಗೆಯಲ್ಲಿ ಶಾಂತತೆಯ ಹುಡುಕಾಟದ ತವಕದಲ್ಲಿರುವಂತೆ ಭಾಸವಾಯಿತು.
    ಡಿಂಪಲ್ ಶಾ ಅವರ ‘ The Quixotic Landscape ‘ ಶೀರ್ಷಿಕೆಯ ಕಲಾಕೃತಿ ಪರಿಸರದ ಮೇಲಿನ ಅಪಾಯಕಾರಿ ಪರಿಣಾಮಗಳನ್ನು ಬಹಳ ಸರಳವಾಗಿ ಅಮೂರ್ತತೆಯ ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಅನಿಸಿತು. ವೃತ್ತಾಕಾರದ ಕ್ಯಾನ್ವಾಸನ್ನು ಇಡೀ ಭೂಮಂಡಲವನ್ನೇ ಪ್ರತಿನಿಧಿಸುತ್ತಿರುವ ಹಾಗೆ ದುಡಿಸಿಕೊಂಡಿದ್ದಾರೆ.
    ಪ್ರದೀಪ್ ಕುಮಾರ್ ಡಿ.ಎಂ. ಅವರ ಕಲಾಕೃತಿಗಳು ನೋಡುಗರ ಹೃದಯಕ್ಕೆ ನಾಟುವಂತಿವೆ. ತಮ್ಮ ಮಣ್ಣಿನ ಸುವಾಸನೆ ಉಣಬಡಿಸಿದ್ದಾರೆ. ರೇಖಾ ಪ್ರಧಾನ ಕಲಾಕೃತಿ ಹಾಗೂ ರೇಖಾಕೃತಿಗಳು ಆ ನೆಲದ, ಮಣ್ಣಿನ ಸಂಸ್ಕೃತಿಗಳನ್ನು ಪ್ರತಿಬಿಂಬಿಸಿವೆ. ಸಾಮಾಜಿನ ನ್ಯಾಯಕ್ಕೆ ಧ್ವನಿಯಾಗಿವೆ. ತಾಯ್ನೆಲದ ಅನುಭವವನ್ನು ವಸ್ತು ವಿಷಯವಾಗಿಸಿಕೊಂಡಿದ್ದಾರೆ.
ಸಮಕಾಲೀನ ಕಾಲಘಟ್ಟದಲ್ಲಿ ತುಸು ಪ್ರಾಯೋಗಿಕ ಚಿಂತನೆಗಳ ಮೂಲಕ ಮುನ್ನೆಲೆಯಲ್ಲಿ ಕಾಣಿಸುವ ರಾಣಿ ರೇಖಾ ಅವರ ‘ The Battle Within ‘ ಪ್ರತಿಷ್ಠಾಪನಾ ಹಾಗೂ ವರ್ಣಚಿತ್ರ ಕಲಾಕೃತಿಗಳು ಪರಿಣಾಮಕಾರಿ ಪ್ರತಿಬಿಂಬವೆನಿಸುತ್ತವೆ. ಪ್ರತಿಬಿಂಬದೊಳಗಿನ ಪ್ರತಿಬಿಂಬ ಮತ್ತದೇ ನೈಜತೆಯನ್ನು ತೆರೆದಿಡುವ ಪ್ರಯತ್ನವೂ ಆಗಿದೆ. ಇನ್ನು
ರಘು ಕೊಂಡೂರು ಅವರ ಸರಣಿ(series) ಕಲಾಕೃತಿಗಳು ನಗರೀಕರಣದ ಪರಿಣಾಮಗಳನ್ನು ಕಣ್ಮುಂದೆ ತರುತ್ತವೆ. ಬದಲಾವಣೆಗೆ ಒಗ್ಗಿಕೊಳ್ಳುವ ಪ್ರಾಕೃತಿಕ ಜಗತ್ತು ಪರಾವಲಂಬಿಯಾಗುವ ಎಚ್ಚರಿಕೆ ಅವರ ಕಲಾಕೃತಿಗಳಲ್ಲಿವೆ. ರಘು ಅವರ ಬಣ್ಣಗಳ ಆಯ್ಕೆ, ಸರಳ ಸಂಯೋಜನೆ ವಿಶೇಷವಾಗಿಯೂ, ಅಷ್ಟೇ ಗಂಭೀರವಾಗಿಯೂ ಕಾಣಿಸುತ್ತವೆ.
    ಮರಿಸ್ಸಾ ಡಿ ಮಿರಂಡಾ ಅವರ ‘ Death of a Planet – Future Unknown ‘ ಕಲಾಕೃತಿ ಮೈವಳಿಕೆ ಮತ್ತು ವಸ್ತುವನ್ನೇ ಮಾಧ್ಯಮವಾಗಿ ದುಡಿಸಿಕೊಂಡಿರುವ ಪ್ರಕ್ರಿಯೆ ಗಮನ ಸೆಳೆಯುತ್ತವೆ. ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುವ ಕಲಾಕೃತಿಗಳು ಉತ್ತರವನ್ನೂ ಪರೋಕ್ಷವಾಗಿ ನೀಡುತ್ತವೆ. ಇನ್ನು ಕೋಯಲ್ ರಹೇಜಾ ಅವರ ‘ You and Me ‘ ಸರಣಿ ಕಲಾಕೃತಿಗಳಲ್ಲಿ ಅಮೂರ್ತವೆನಿಸುವ ಮೂರ್ತವಾದವಿದೆ. ಗ್ರಾಫ್ ಶೀಟ್ (graph sheets) ಗಳನ್ನು ಆಸಕ್ತಿ ಮೂಡಿಸುವ ರೀತಿಯಲ್ಲಿ ದುಡಿಸಿಕೊಂಡಿದ್ದಾರೆ. ಮಕ್ಕಳು ಮನೆಯಲ್ಲಷ್ಟೇ ಮಕ್ಕಳಲ್ಲ. ನೋಡುಗರನ್ನೂ ಮುಗ್ಧ ಮಕ್ಕಳ ಜೊತೆ ಮಕ್ಕಳನ್ನಾಗಿಸುವ ಜಾಣತನ ತೋರಿದ್ದಾರೆ. ಕ್ಷಣಕಾಲ ಕಲಾಕೃತಿಗಳ ಮುಂದೆ ನಿಂತು ಹುಡುಕಾಟ ನಡೆಸುವ ಪ್ರಕ್ರಿಯೆ ಗಮನಸೆಳೆಯುತ್ತವೆ. ಒಂದೊಳ್ಳೆಯ ಪ್ರಯತ್ನ.
    ವೇಣುಗೋಪಾಲ ವಿ.ಜಿ. ಅವರ ‘ Until Then ‘ ಸರಣಿ ಕಲಾಕೃತಿಗಳು ಕೋವಿಡ್ ಸಮಯವನ್ನು ನೆನಪಿಸುತ್ತವೆ. ಸಂದಿಗ್ಧ ಸಮಯದಲ್ಲಿ ಜೀವವೊಂದು ಪರಿಸರ ಆಗು ಹೋಗುಗಳಿಗೆ ಸ್ಪಂದಿಸುವ, ಸ್ವಾಭಾವಿಕ ಬದಲಾವಣೆಯ ಸಂಗತಿಗಳನ್ನೇ ವಸ್ತು ವಿಷಯ ಮಾಡಿಕೊಂಡಿದ್ದಾರೆ. ಜೇನು ಜೀವನ ಕಟ್ಟಿಕೊಳ್ಳುವ ವಿಸ್ಮಯವೇ ವೇಣುಗೋಪಾಲ್ ಅವರ ಕಲಾಕೃತಿಗಳ ಜೀವಾಳವಾಗಿದೆ. ಅಮೃತಾ ನಂಬಿಯಾರ್ ಅವರ
‘ Olie ‘ ಶೀರ್ಷಿಕೆಯ ಪ್ರತಿಷ್ಠಾಪನಾ (installation) ಕಲಾಕೃತಿ ತುಸು ಕಣ್ಣರಳಿಸುವಂತಿದೆ. ಸಾಮಾನ್ಯವೆನಿಸುವ ಬೆಳಕನ್ನು ಹಿಡಿದು ಇನ್ನಾವುದೋ ವಸ್ತುವಿನೊಳಗಿಟ್ಟರೆ ಹೇಗೆ ಪ್ರತಿಕ್ರಿಯಿಸಲು ಸಾಧ್ಯ ಎನ್ನುವುದಕ್ಕೆ ಒಂದು ನಿದರ್ಶನವಾಗಲಿದೆ. ಈ ಮೂಲಕ ಅಣಬೆಗಳ (mushrooms) ಹುಟ್ಟಿನ ಸೋಜಿಗವನ್ನು ಕಲಾಕೃತಿಯಾಗಿಸಿದ್ದಾರೆ. ಅಲಂಕಾರ ತುಸು ಜಾಸ್ತಿ ಅನಿಸಿದರೂ ಪ್ರಕೃತಿ ಪ್ರಿಯರ ಹೃದಯಸ್ಪರ್ಶಿ ಕಲಾಕೃತಿ ಎನ್ನಬಹುದು.
    ಪ್ರವೀಣ್ ಕುಮಾರ್ ಅವರ ಕಲಾಕೃತಿಗಳು ವಿಭಿನ್ನ ಪ್ರಯತ್ನವಾಗಿ ಕಾಣಿಸುತ್ತವೆ. ರೇಖೆ ಅಮೂರ್ತವಾಗಿ ಹರಿದಾಡಿವೆ. ರೇಖೆ ಲೋಹದಂತೆ ಘನಸ್ವರೂಪ ಪಡೆದಿವೆ. ರೇಖೆ ಬಿಳಿಯಾಗಿಯೂ, ಕಪ್ಪಾಗಿಯೂ ಅಷ್ಟೇ ಅಲ್ಲ ಸ್ವರ್ಣ ಶೃಂಗಾರವಾಗಿಯೂ ರೂಪ ತಾಳಿದೆ. ತಮ್ಮ ಎಂದಿನ ಚಿಂತನೆಯನ್ನೇ ಮಗದೊಂದು ಮಗ್ಗುಲಲ್ಲಿ ನೋಡುವ ಪ್ರಯತ್ನವಾಗಿದೆ. ಬಹಳ ಆಪ್ತವೆನಿಸುವ ಕೌಶಲ್ಯಾಧಾರಿತ ಕಲಾಕೃತಿಗಳು. ಶಿಸ್ತುಬದ್ಧ ನಿರ್ವಹಣೆ ಸೌಂದರ್ಯ ಹೆಚ್ಚಿಸಿದೆ. ಕಪ್ಪು ಬಿಳಿಯಾಗಿ, ಬಿಳಿ ಕಪ್ಪಾಗಿ, ಕಪ್ಪು-ಬಿಳಿ ಮಿರುಗುವ ಹಿತ್ತಾಳೆಯಾಗಿದೆ.
    ಪ್ರೀತ್ಪಾಲ್ ದಹೆಲೆ ಅವರ ಪ್ರತಿಷ್ಠಾಪನಾ ಕಲಾಕೃತಿಗಳು ಸುಗಂಧ ಪಸರಿಸುವ ಹೂವುಗಳಾಗಿ ಅರಳಿವೆ. ಹೂವರಳುವ ಕಾಲದ ಮಣ್ಣಿನ ಸುವಾಸನೆ ನೋಡುಗರನ್ನು ಸ್ಪರ್ಶ ಜ್ಞಾನಕ್ಕೆ ಪ್ರೆರೇಪಿಸುತ್ತವೆ. ಬಹಳ ಅರ್ಥಪೂರ್ಣ ಮತ್ತು ಸಂದರ್ಭೋಚಿತ ಪ್ರಯತ್ನ ಎನ್ನಬಹುದು. ಇನ್ನು ವಿಶಾಲ್ ಕವಟೇಕರ್ ಅವರ
‘ Different faces of Humour ‘ ಶಿಲ್ಪ ಕಲಾಕೃತಿಗಳು ಗಮನ ಸೆಳೆಯುತ್ತವೆ. ಗಾಂಭೀರ್ಯತೆಗೆ ಕಡಿವಾಣವಿಟ್ಟು ಆಮೆಗತಿಯಲ್ಲಿ ಲಾಸ್ಯಕ್ಕೆ ಸಂಧಿಸಿ ಹಾಸ್ಯದತ್ತ ಕರೆದೊಯ್ಯುತ್ತವೆ. ಬಹಳ ಸೊಗಸಾದ ನಿರ್ವಹಣೆ ಕಾಣಬಹುದು. ನಂದೀಶ್ ಶಾಂತಿ ಪ್ರಕಾಶ್ ಅವರ ‘ Putting a Biscuit ‘ ಕಲಾಕೃತಿ ಮೌನ ಕ್ರಾಂತಿಯಾಗಿ ಕಾಡುತ್ತವೆ. ಕಲಾಕೃತಿ ಪ್ರಸ್ತುತ ರಾಜಕೀಯ ಸ್ಥಿತಿಗತಿಗೆ ಕನ್ನಡಿ ಹಿಡಿದಂತಿದೆ. ಬಹಳ ಮಾರ್ಮಿಕವಾದ ಅರ್ಥ ಹೇಳುವ, ಸಂದೇಶ ನೀಡುವಂತೆ ನಿರೂಪಿಸಿದ್ದಾರೆ. ಸಾಮಾಜಿಕ, ಗಂಭೀರ ಸಮಸ್ಯೆಯ ವಿಚಾರವಾದಕ್ಕೆ ಬಿಸ್ಕೆಟ್ ಚರ್ಚೆ ಹೆಚ್ಚಿಸಲಿದೆ.
    ಅನವಿ ಮಲಿಕ್ (Anavi Mullick) ಅವರ ‘ i see you, i see me ‘ ಕಲಾಕೃತಿ ಚಿಕಣಿ (miniature) ಚಿತ್ರಗಳಿಂದ ಪ್ರಭಾವಿತರಾಗಿರುವಂತೆ ಭಾಸವಾಗುತ್ತವೆ. ಸಂಯೋಜನಾ ಶೈಲಿ(composition style), ಸಮತೋಲನಾ(balance) ಪ್ರಕ್ರಿಯೆ ಗಮನ ಸೆಳೆಯುತ್ತವೆ. ಸುಕನ್ವಾ ಗರ್ಗ್ ಅವರ ‘ The stories of scarless wounds ಮತ್ತು Every scar has a Story ‘ ಎರಡೂ ಕಲಾಕೃತಿಗಳ ಮೈವಳಿಕೆ (texture) ಆಸಕ್ತಿ ಕೆರಳಿಸುತ್ತವೆ. ಆದರೆ ಅವರ ಅಭಿವ್ಯಕ್ತಿಯ ಮೂಲ ಗಮನಿಸಿದಾಗ ಪ್ರಭಾವಕ್ಕೊಳಗಾದ ಅಂಶಗಳು (elements) ಎನ್ನುವುದು ಸ್ಪಷ್ಟ. ಹಾಗೇ ಪ್ರಭಾವ ಪ್ರಭೆಯಾಗಿ ಬದಲಾದರೆ ಅಚ್ಚರಿ ಇಲ್ಲ.
” I am soundless , I am speechless , Do not stare at me ” ಎನ್ನುವ ಸಂದೇಶ ಕೊಡುವ ಪ್ರೇಕ್ಷಾ ತತೆರ್ ಅವರ ಕಲಾಕೃತಿಗಳು ಪ್ರಕೃತಿ ಸಹಜ ಗುಣಲಕ್ಷಣಗಳ ಅನಾವರಣವಾಗಿ ಕಾಣಿಸುತ್ತವೆ. ಸಣ್ಣಳತೆಯ ಕಲಾಕೃತಿಗಳ ಪರಿಣಾಮಕಾರಿ ಸಂದೇಶ ಯಶಸ್ವಿ ಅಭಿವ್ಯಕ್ತಿಯಾಗಿದೆ. ಇನ್ನು ಅಕ್ಷಯ್ ಮಾಲಿ ಅವರ ‘ Being your self ‘ ಶೀರ್ಷಿಕೆಯ ಕಲಾಕೃತಿಗಳು ಕ್ಯಾಮರಾ ಕಣ್ಣಿನ ಸೌಂದರ್ಯ. ಬೆತ್ತಲೆಯ ಹಿಂದಿನ ಭಾವ ಸಂಗಮ. ಮಡಿವಂತಿಕೆಯನ್ನು ಮೀರಿದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ನೋಡುಗನ ಕಣ್ಣಿಗೆ ಕಾಣಸಿಗುವುದು ನೈಜತೆಯೇ ಹೊರತು ಕಾಲ್ಪನಿಕವಲ್ಲ. ಒಂದು ಉತ್ತಮ ನಿರ್ವಹಣೆ ಕಲಾಕೃತಿಯಲ್ಲಿದೆ. ನೆಲೆ ಮೀರಿದ ಅಲೆ ಕಾಣಿಸಲಿದೆ.
    ಶಿವಪ್ರಸಾದ್ ಕೆ.ಟಿ. ಅವರು ಹುಲಿ ಕಥೆ ಹೇಳಿದ್ದಾರೆ. ಅವರ ‘ Pili Pathera- Tiger story ‘ ಶೀರ್ಷಿಕೆಯ ಕಲಾಕೃತಿಗಳ ಮೂಲಕ ತುಳುನಾಡಿನ ಮಣ್ಣಿನ ಗರ್ಜನೆ ವೀರರಸವಾಗಿಸಿ ನೋಡುಗರ ಮುಂದಿಟ್ಟಿದ್ದಾರೆ. ನಂಬಿಕೆ ಎಂದಿಗೂ ಪ್ರಭಾವಶಾಲಿ ಎನ್ನುವ ಸಂದೇಶವಿದೆ. ಪರಿಸರ, ಪ್ರಕೃತಿ ಬಗೆಗಿನ ಕಾಳಜಿ ಜೀವಂತವಾಗಿಸಿದ್ದಾರೆ.
    Friends, ಒಂದೊಳ್ಳೆಯ ಕಲಾಪ್ರದರ್ಶನ ” The Pollen Waits on Tiptoe…” ಏಪ್ರಿಲ್ 8ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ. ನಮ್ಮೆಲ್ಲಾ ಕಲಾವಿದರಿಗೆ ಅಭಿನಂದನೆಗಳು 💐.

 


Share This

Leave a Reply

Your email address will not be published. Required fields are marked *