ಸಾಂಪ್ರದಾಯಿಕ ನೆಲೆಗಟ್ಟು ಮೀರಿದ ಗೊಂಬೆಗಳು

Share This

  • ಅಮೂರ್ತವೆನಿಸುವ ಮೂರ್ತ ಸ್ವರೂಪ ದರ್ಶನ

  • ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ಗೊಂಬೆ ಹಬ್ಬ

ದಸರಾ ಬಂತೆಂದರೆ ಎಲ್ಲಿಲ್ಲದ ಸಡಗರ. ಮನೆಗಳ ಶೃಂಗಾರ, ಸ್ವಚ್ಚತೆ, ಒಂಭತ್ತು ದಿನಗಳ ಕಾಲ ಪೂಜೆಗೆ ತಯಾರಿ… ಅಬ್ಬಬ್ಬಾ ಒಂದಲ್ಲ ಎರಡಲ್ಲ ನೂರಾರು ಕೆಲಸಗಳು. ಅದೇನೋ ಒಂದು ಸಡಗರ. ಭಾರತದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ.

ಈ ಎಲ್ಲಾ ತಯಾರಿಗಳ ಜೊತೆಗೆ ದಕ್ಷಿಣ ಭಾರತದ ಅನೇಕ ಕಡೆ, ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ಅನೇಕ ಕಡೆ ಗೊಂಬೆಗಳನ್ನು ಇಟ್ಟು ಪೂಜಿಸುವ ಸಂಪ್ರದಾಯವಿದೆ. ದೇವಾನುದೇವತೆಗಳ, ಪ್ರಾಣಿ ಪಕ್ಷಿಗಳ, ಕಥೆಯಾಧಾರಿತ, ಬೇರೆ ಬೇರೆ ಸನ್ನಿವೇಶಗಳ ತರಹೇವಾರಿ ಗೊಂಬೆಗಳನ್ನು ಈ ಸಂದರ್ಭದಲ್ಲಿ ಕಾಣಲು ಸಾಧ್ಯ. ಸಾವಿರಾರು ವರ್ಷಗಳಿಂದ ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವ ನೂರಾರು ಕುಟುಂಬಗಳನ್ನು ಈಗಲೂ ನೋಡಬಹುದಾಗಿದೆ.

 

 

| ದೇವಿ ದುರ್ಗೆಗೆ ಬೆಂಬಲ |
ದೇವಿ ಚಾಮುಂಡೇಶ್ವರಿಯು ರಾಕ್ಷಸನಾದ ಮಹಿಷಾಸುರನ ವಿರುದ್ಧ ಯುದ್ಧ ಮಾಡುವ ಸಂದರ್ಭದಲ್ಲಿ ಸಹಾಯಕ್ಕೆ ದೇವಾನುದೇವತೆಗಳು ಬಂದಿದ್ದರು. ತಮ್ಮ ಎಲ್ಲಾ ಶಕ್ತಿಯನ್ನು ದೇವಿ ದುರ್ಗೆಗೆ ನೀಡಿದರು. ಆಗ ದೇವಾನುದೇವತೆಗಳು ಶಕ್ತಿಹೀನರಾಗಿ ಪ್ರತಿಮೆಯಂತೆ ನಿಂತರು. ಗೊಂಬೆಗಳಂತೆ ನಿಂತಿರಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಯುದ್ಧ ಆರಂಭವಾಗಿ 10 ನೇ ದಿನದಂದು ದುರ್ಗಾದೇವಿಯು ಮಹಿಷಾಸುರನನ್ನು ಜಯಿಸಿದಳು ಎನ್ನುವುದು ಪ್ರತೀತಿ.

ಈ ಕಾರಣಕ್ಕಾಗಿ ದುರ್ಗಾ ದೇವಿಯ ಗೌರವಾರ್ಥವಾಗಿ ಗೊಂಬೆಗಳ ರೂಪದಲ್ಲಿ ದೇವರು ಮತ್ತು ದೇವತೆಗಳನ್ನು ಪೂಜಿಸುವ ಸಂಪ್ರದಾಯವಿದೆ. ವಿಜಯನಗರ ಸಾಮ್ರಾಜ್ಯದ ಅಸ್ತಿತ್ವದಿಂದಲೂ ಈ ಪದ್ಧತಿ ಪ್ರಚಲಿತದಲ್ಲಿದೆ ಎಂದು ಹೇಳಲಾಗುತ್ತದೆ. ಹಳೆಯ ಮೈಸೂರು ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ.

ದಕ್ಷಿಣ ಭಾರತದಲ್ಲಿ ನವರಾತ್ರಿಯ ಹಬ್ಬವನ್ನು ಬೊಂಬೆ ಹಬ್ಬವೆಂದು, ಗೋಲು ಅಥವಾ ಕೋಲು (ಕನ್ನಡ) ಎಂದು ಕರೆಯುತ್ತಾರೆ. ತೆಲಗು ಮಂದಿ ಬೊಮ್ಮಲ ಕೊಲುವು ಎಂದು, ತಮಿಳಿಗರು ಬೊಮ್ಮಾಯಿ ಕೋಲು ಎಂದು ಕರೆಯುತ್ತಾರೆ. ಸಾರ್ವಜನಿಕವಾಗಿ ಎಲ್ಲರೂ ದಸರಾ ಗೊಂಬೆಗಳೆಂದು ಕರೆಯುತ್ತಾರೆ. ಸಾಮಾನ್ಯವಾಗಿ ಆಟಿಕೆಗಳನ್ನು ಶೃಂಗಾರಿಸಿ ಪ್ರತಿಷ್ಠಾಪಿಸುವುದು ರೂಢಿಯಲ್ಲಿದೆ.

| ಗ್ಯಾಲರಿಗಳಲ್ಲಿ ಬೊಂಬೆಹಬ್ಬ |
ಇತ್ತೀಚಿನ ಕೆಲ ವರ್ಷಗಳಲ್ಲಿ ದಸರಾ ಸಂಭ್ರಮಗಳು ಹೊಸ ಹೊಸ ರೂಪ ಪಡೆದುಕೊಂಡಿವೆ. ಮನೆ ಮನೆಗಳಲ್ಲಿ ಪೂಜೆಗೆ ಇಡಲಾಗುತ್ತಿದ್ದ ಗೊಂಬೆಗಳು ಪ್ರದರ್ಶನದ ಪಡೆದುಕೊಂಡವು. ತದನಂತರದ ದಿನಗಳಲ್ಲಿ ಸಾರ್ವಜನಿಕವಾಗಿ ಗಣೇಶನನ್ನು ಕುಳ್ಳಿರಿಸುವ ಮಾದರಿಯಲ್ಲೆ ಗೊಂಬೆಗಳನ್ನಿಟ್ಟು ಪ್ರದರ್ಶಿಸುವುದೂ ಮುನ್ನಲೆಗೆ ಬಂತು. ಈಗೀಗ ಅನೇಕ ಗ್ಯಾಲರಿಗಳಲ್ಲಿ ವಿಭಿನ್ನವಾಗಿ ಗೊಂಬೆಗಳನ್ನು ಪ್ರದರ್ಶಿಸುವ ಪ್ರಯತ್ನಗಳು ನಡೆಯುತ್ತಿವೆ. ಭಾರತೀಯ ಸಂಸ್ಕೃತಿಯ ಪ್ರತೀಕವೆನಿಸುವ ಗೊಂಬೆ ಪ್ರದರ್ಶನಗಳನ್ನು ವೃತ್ತಿಪರವಾಗಿಸುವ ಸ್ವಾಗತಾರ್ಹ ಪ್ರಯತ್ನಗಳೂ ನಡೆದಿವೆ.

ಇದೀಗ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1,2 ಮತ್ತು 3ರಲ್ಲಿ ಗೊಂಬೆಗಳನ್ನು ಪ್ರದರ್ಶಿಸಲಾಗಿದೆ. ಈ ಹಿಂದೆ ಮನೆ ಮನೆಗಳಲ್ಲಿ ಕಾಣಲು ಸಾಧ್ಯವಾಗುತ್ತಿದ್ದ ಸಾಂಪ್ರದಾಯಿಕ ಗೊಂಬೆಗಳಿಗಿಂತ ಭಿನ್ನವಾದ ಗೊಂಬೆಗಳನ್ನು ಪ್ರದರ್ಶಿಸಲಾಗಿದೆ. ಆಧುನಿಕತೆಯ ಪ್ರಭಾವ ಗೊಂಬೆಗಳಲ್ಲಿ ಕಾಣುತ್ತಿವೆ. ಭವ್ಯ, ನವ್ಯ, ಶ್ರಾವ್ಯವೆನಿಸುವ ಗೊಂಬೆಗಳು ಕಾವ್ಯಕ್ಕೆ ಪ್ರೇರಣೆಯಾಗಿವೆ. ಅನೇಕ ಕಲಾವಿದರು ಗೊಂಬೆ ರೂಪದ ಮೂರ್ತ ಮತ್ತು ಅಮೂರ್ತವೆನಿಸುವ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.

ಹೇಮಂತ್ ರಾಜು, ಜಗದೀಶ್ ಎಸ್, ಪುನೀತ ಖಾತ್ರಿ, ರೂಪಾ ಕಾಂಗೋವಿ, ಟಿ.ವಿ.ತಾರಕೇಶ್ವರಿ, ನಷ್ಮಿತಾ ಡಿ.ಎನ್., ಶ್ರೀಕಾಂತ್ ಎ., ಜಕ್ರಿಯಾಸ್ ಏಕ್, ಜ್ಯೋತಿ ಸಿ.ಸಿಂಗ್ ಡಿಯೋ, ಊರ್ಮಿಳಾ ವಿ.ಜಿ., ಗೀತಾಂಜಲಿ ಕಪೂರ್‌, ಬಿ.ಎಂ.ಮಾಲತಿ ದೇವಿ, ಅಭಯ ಶರ್ಮಾ, ಶೈಲಜಾ ರಮೇಶ್, ಮಮತ್ ಎನ್.ಸ್ವಾಮಿ, ಶಿಮೋನಾ ಅಗರ್ವಾಲ್, ವಿಜಯಲಕ್ಷ್ಮೀ ಸೆಂಥಿಲ್ ಕುಮಾರ್, ಸ್ನೇಹಾ ಮಂಜುನಾಥ್, ಮಮತಾ ಬೋರಾ ಮತ್ತು ಡಾ.ಶಾಲಿನಿ ಸಿಂಗ್ ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ.

ಕಲಾಪ್ರದರ್ಶನವು ಅಕ್ಟೋಬರ್ 12ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿ ಬನ್ನಿ.

 


Share This

1 Comment

Leave a Reply

Your email address will not be published. Required fields are marked *