- ಸ್ಯಾಫ್ರಾನ್‌ಆರ್ಟ್ಸ್ ಹರಾಜಿನಲ್ಲಿ 117.81 ಕೋಟಿ ವಹಿವಾಟು
- ಹೊಸ ದಾಖಲೆ ಬರೆದ ಕಲಾ ಪೋಷಕ ಸಂಸ್ಥೆ ಸ್ಯಾಫ್ರಾನ್‌ಆರ್ಟ್ಸ್
ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆ ಸ್ಯಾಫ್ರಾನ್‌ಆರ್ಟ್ಸ್ ತನ್ನ 25ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಏ.2ರಂದು ನಡೆಸಿದ ಹರಾಜು ಪಕ್ರಿಯೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಭಾರತದ ಖ್ಯಾತ ಕಲಾವಿದ ತಯೆಬ್ ಮೆಹ್ತಾ ಅವರ ‘Trussed Bull’ ಶೀರ್ಷಿಕೆಯ ಕಲಾಕೃತಿ 61.80 ಕೋಟಿ ರುಪಾಯಿಗೆ ಮಾರಾಟವಾಗಿದೆ ಎಂದು ಸ್ಯಾಫ್ರಾನ್‌ಆರ್ಟ್ಸ್ ಹೇಳಿಕೊಂಡಿದೆ.
1954ರಲ್ಲಿ ಲಂಡನ್ ಮ್ಯೂಸಿಯಂನಲ್ಲಿರುವ ಸಂದರ್ಭದಲ್ಲಿ ಈಜಿಪ್ಟ್ relief ಕಲಾಕೃತಿ ನೋಡಿ, ಅದರಿಂದ ಪ್ರೇರೇಪಿತರಾಗಿ 1956ರಲ್ಲಿ ರಚಿಸಿರುವ 37” x 41.5” ಅಳತೆಯ ತೈಲವರ್ಣದ ಕಲಾಕೃತಿ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿಯೇ ನಡೆದ ಹರಾಜು ಪ್ರಕ್ರಿಯೆಗಳಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ೨ನೇ ಕಲಾಕೃತಿ ಇದು. ಕಳೆದ ವರ್ಷ ಹೆಸರಾಂತ ಕಲಾವಿದೆ ಅಮೃತಾ ಶೇರ್‌ಗಿಲ್ ಅವರ ಕಲಾಕೃತಿಯೂ ಹೆಚ್ಚೂಕಡಿಮೆ ಇದೇ ಮೊತ್ತಕ್ಕೆ ಮಾರಾಟವಾಗಿತ್ತು. ಒಟ್ಟಾರೆ ಭಾರತೀಯ ಕಲಾವಿದರ ಕಲಾಕೃತಿಗಳು ಈಗ ವಿಶ್ವ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇತ್ತೀಚೆಗಷ್ಟೇ ಎಂ.ಎಫ್.ಹುಸೇನ್ ಅವರ ಕಲಾಕೃತಿ ವಿದೇಶದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 118 ಕೋಟಿ ರುಪಾಯಿಗೆ ಮಾರಾಟವಾಗಿತ್ತು.
ಇನ್ನೊಂದು ಗಮನಿಸಬಹುದಾದ ಅಂಶವೇನೆAದರೆ, ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 217.81 ಕೋಟಿ ರು. ವಹಿವಾಟು ನಡೆದಿದೆ. ಹರಾಜಿಗೆಂದು ಜೋಡಿಸಲಾದ ಎಲ್ಲಾ ಕಲಾಕೃತಿಗಳೂ ಮಾರಾಟವಾಗಿವೆ ಎಂದು ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಯಾಫ್ರಾನ್‌ಆರ್ಟ್ಸ್ ಸಹ ಸಂಸ್ಥಾಪಕ ಮತ್ತು ಸಿಇಓ ದಿನೇಶ್ ವಜಿರಾನಿ ಅವರು, “ದಕ್ಷಿಣ ಏಷ್ಯಾ ಆರ್ಟ್ ಮಾರ್ಕೆಟ್ ಎಷ್ಟು ಬೆಳೆದಿದೆ ಮತ್ತು ಮಾರುಕಟ್ಟೆಯ ಬಲ ಏನೆನ್ನುವುದು ಈ ಹರಾಜು ಪ್ರಕ್ರಿಯೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಮತ್ತು ಏಷ್ಯಾ ಪ್ರಾಂತ್ಯದ ಕಲಾವಿದರ ಕಲಾಕೃತಿಗಳಿಗೆ ಬೇಡಿಕೆ ಎಷ್ಟಿದೆ ಎನ್ನುವುದನ್ನೂ ಸಾಬೀತು ಮಾಡಿದೆ. ಈ ಬೆಳೆವಣಿಗೆಯ ಹಿಂದೆ ಸ್ಯಾಫ್ರಾನ್‌ಆರ್ಟ್ಸ್ ಕೂಡ ಇದೆ ಎನ್ನುವುದನ್ನು ಧೈರ್ಯದಿಂದ ನಾವು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ” ಎಂದಿದ್ದಾರೆ.
ದಿನೇಶ್ ವಜಿರಾನಿ ಅವರ ಮಾತು ಸತ್ಯ ಕೂಡ. ಕಳೆದ 25 ವರ್ಷಗಳಲ್ಲಿ ಅನೇಕ ಕಲಾವಿದರ ಕಲಾಕೃತಿಗಳನ್ನು ಪರಿಚಯಿಸಿ, ಅಗತ್ಯ ಪ್ರಚಾರ ನೀಡಿ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡಿರುವ ಪೋಷಕ ಸಂಸ್ಥೆಗಳಲ್ಲಿ ಸ್ಯಾಫ್ರಾನ್‌ಆರ್ಟ್ಸ್ ಒಂದಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.