- ಬಾಬು ಜತ್ತಕರ್, ಎಂ.ಜಿ.ದೊಡ್ಡಮನಿ, ಕೆ.ಸಿ.ಎಸ್.ಪ್ರಸನ್ನ ಅವರಿಗೆ 2024-25ನೇ ಸಾಲಿನ ಗೌರವ
- ಬಿ.ಎಸ್.ದೇಸಾಯಿ, ಡಾ.ಶಶಿಕಲಾ ಹೂಗಾರ್, ಸಿ.ಚಿಕ್ಕಣ್ಣ ಅವರಿಗೆ 2025-26ನೇ ಸಾಲಿನ ಗೌರವ
ರಾಜ್ಯದ ಆರುಮಂದಿ ಹಿರಿಯ ಕಲಾವಿದರಿಗೆ 2024-25ನೇ ಸಾಲಿನ ಮತ್ತು 2025-26ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಬಾಗಲಕೋಟೆಯ ಬಾಬು ಜತ್ತಕರ್, ಕಲಬುರಗಿಯ ಎಂ.ಜಿ.ದೊಡ್ಡಮನಿ, ತುಮಕೂರಿನ ಕೆ.ಸಿ.ಎಸ್. ಪ್ರಸನ್ನ, ಹಾಸನದ ಬಿ.ಎಸ್.ದೇಸಾಯಿ, ವಿಜಯಪುರದ ಡಾ.ಶಶಿಕಲಾ ಹೂಗಾರ್, ಮೈಸೂರಿನ ಸಿ.ಚಿಕ್ಕಣ್ಣ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ವೇಳೆ, 20 ಮಂದಿ ಕಲಾವಿದರಿಗೆ 2023-24ನೇ ಮತ್ತು 2024-25ನೇ ಸಾಲಿನ ವರ್ಣಶ್ರಿ ಪ್ರಶಸ್ತಿಯನ್ನು ಹಾಗೂ 53ನೇ ವಾರ್ಷಿಕ ಕಲಾ ಬಹುಮಾನಕ್ಕೆ ಆಯ್ಕೆಯಾದ 10 ಮಂದಿ ಕಲಾವಿದರ ಪಟ್ಟಿಯನ್ನೂ ಪ್ರಕಟಿಸಲಾಗಿದೆ.
ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾದ ಹಿರಿಯ ಕಲಾವಿದರಿಗೆ ತಲಾ 50,000/- ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. ವರ್ಣಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ಕಲಾವಿದರಿಗೆ ಹಾಗೂ 53ನೇ ವಾರ್ಷಿಕ ಕಲಾ ಪ್ರದರ್ಶನ ಪ್ರಶಸ್ತಿ ಲಭಿಸಿದವರಿಗೆ 25,000/- ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



