ಸ್ಮೃತಿಯಲ್ಲಿ ಸ್ಮೃತಿ ಶ್ರೀಧರ್ “ನೃತ್ಯೋಪಾಸನ”!

Share This

• ನೀಳಕಾಯದ ನರ್ತಕಿಯ ಭಾವಪೂರ್ಣ ಪ್ರಸ್ತುತಿ  • ವಿದುಷಿ ರಕ್ಷಾ ಕಾರ್ತಿಕ್ ಶಿಷ್ಯೆ ಯಶಸ್ವಿ ರಂಗಪ್ರವೇಶ

ನೃತ್ಯಾಭ್ಯಾಸ ಕೇವಲ ಒಂದು ಕಲೆಯಾಗಿ ಗುರುತಿಸುವಂತದ್ದಲ್ಲ. ಅದರಲ್ಲೂ ಸಾಂಪ್ರದಾಯಿಕ ನೃತ್ಯ ಪ್ರಕಾರಗಳೆಲ್ಲವೂ ದೈಹಿಕ ವ್ಯಾಯಾಮಕ್ಕಿಂತಲೂ ಹೆಚ್ಚು ಆರೋಗ್ಯ ವೃದ್ಧಿಸುವ ಶಕ್ತಿ. ಅಭ್ಯಾಸ ನಿರತರಿಗೆ ಮಾನಸಿಕ ಸ್ಥಿಮಿತ ವೃದ್ಧಿಸಬಲ್ಲ ಕಲೆ. ಶಿಸ್ತುಬದ್ಧವಾಗಿ ಕಲಿಯಬೇಕಾದ, ತಪಸ್ಸು ಮಾಡಿ ಸಿದ್ಧಿಸಿಕೊಳ್ಳಬೇಕಾದ ವಿದ್ಯೆ.
ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ನೃತ್ಯ ಪ್ರಕಾರಗಳು ಸೇರಿದಂತೆ ಬಹುತೇಕ ಲಲಿತಕಲೆಗಳ ಶಿಕ್ಷಣವೆನ್ನುವುದು ವಾಣಿಜ್ಯೀಕರಣದ ಪ್ರಭಾವದಿಂದ ದಿನದಿಂದ ದಿನಕ್ಕೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಬಂದಿವೆ. ಔಪಾಸನೆಯಿಂದ ನರ್ತಕಿ ಅಥವಾ ನರ್ತಕ ಪಡೆದುಕೊಳ್ಳಬಹುದಾದ ಪ್ರಯೋಜನಗಳು ಇಲ್ಲವಾಗಿವೆ. ಸಂಸ್ಕಾರದಿಂದ ಬರಬೇಕಾದ ಅನೇಕ ಸತ್ಯಗಳಿಂದ ಇಂದಿನ ನರ್ತಕಿ/ನರ್ತಕರು ವಂಚಿತರಾಗುತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಇವುಗಳಿಗೆ ಕಾರಣಗಳನ್ನು ಹುಡುಕಲಾರಂಭಿಸಿದರೆ ಅಂತಿಮವಾಗಿ ಪೋಷಕರದ್ದೇ ಲೋಪವಾಗಿ ಗೋಚರಿಸುತ್ತವೆ. ಆದರೆ, ಈ ಎಲ್ಲಾ ಆಧುನೀಕರಣದ ನಡುವೆಯೂ ಪರಂಪರೆಯ ಮೇಲಿನ ಪ್ರೀತಿ ಬೆಳೆಸಿಕೊಂಡು, ಸುಸಂಸ್ಕೃತರಾಗಿ ಇರಬೇಕೆನ್ನುವ ಅಭಿಲಾಸೆ ಬೆಳೆಸಿಕೊಂಡಿರುವ ಕುಟುಂಬಗಳು ಒಂದಿಷ್ಟು ಭರವಸೆ ಮೂಡಿಸುತ್ತವೆ. ಸನಾತನ ಪದ್ಧತಿ, ಬದುಕು ಇನ್ನಷ್ಟು ವರ್ಷಗಳ ಕಾಲ ನೋಡಲು ಸಾಧ್ಯವೆನಿಸುತ್ತವೆ.
ಇಂತಹ ಭರವಸೆ ಮೂಡಿಸಿದ ನೃತ್ಯ ಕಾರ್ಯಕ್ರಮ ಜೂನ್ 8, 2024 ಭಾನುವಾರ ಕೋರಮಂಗಲದ ಸತ್ಯ ಸಾಯಿ ಸಂಸ್ಕೃತ ಸದನಂ ರಂಗಮಂದಿರದಲ್ಲಿ ನಡೆಯಿತು. ಶ್ರೀ ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಗುರುವರ್ಯರ ಉಪಸ್ಥಿತಿಯಲ್ಲಿ ನಡೆದ “ನೃತ್ಯೋಪಾಸನ” ಕಾರ್ಯಕ್ರಮದಲ್ಲಿ ಭರತನಾಟ್ಯ ಗುರು, ನಟನಂ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್ ನಿರ್ದೇಶಕಿ, ಆಚಾರ್ಯ ಡಾ. ರಕ್ಷಾ ಕಾರ್ತಿಕ್ ಅವರ ಶಿಷ್ಯೆ ಕುಮಾರಿ ಸ್ಮೃತಿ ಶ್ರೀಧರ್ ಅವರು ಗುರುವಿನ ಆಶೀರ್ವಾದ ಪಡೆದು ರಂಗಪ್ರವೇಶ ಮಾಡಿದರು. ಉನ್ನತ ನೃತ್ಯಾಭ್ಯಾಸಕ್ಕೆ ಈ ಮೂಲಕ ಸಾಮರ್ಥ್ಯ ಅಧಿಕೃತಪಡಿಸಿಕೊಂಡರು. ನೂರಾರು ನೃತ್ಯಾಭಿಮಾನಿಗಳು ಈ ಭಕ್ತಿಪೂರ್ವಕ ನೃತ್ಯ ಸಂಜೆಗೆ ಸಾಕ್ಷಿಯಾದರು. ನೀಳಕಾಯದ ಹಂಸ ಮದನೆಯಂತೆ ತೋರಿದ ಸ್ಮೃತಿಯ ನೃತ್ಯೋಪಾಸನೆಯನ್ನು ಕಣ್ತುಂಬಿಕೊಂಡರು.
ದಕ್ಷಿಣ ಭಾರತದ ವೈಷ್ಣವ ಸಂತರಲ್ಲಿ ಕಡೆಯವರಾದ ತಿರುಮಂಗೈ ಆಳ್ವರ್ ರಚಿಸಿದ ವಾಲಾಚಿ ರಾಗ (ಹಿಂದೂಸ್ತಾನಿ ಸಂಗೀತದ ಕಲಾವತಿ ರಾಗಕ್ಕೆ ಅತ್ಯಂತ ಸನಿಹದ್ದು), ಆದಿ ತಾಳದಲ್ಲಿ ಅಳವಟ್ಟ ಪುಷ್ಪಾಂಜಲಿಗೆ ಅತ್ಯಂತ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟ ಸ್ಮೃತಿ ಶ್ರೀಧರ್ ಅವರು, ಸೊಗಸಾದ ಪ್ರದರ್ಶನ ನೀಡಿ ಯಶಸ್ವಿ ಶುಭಾರಂಭಕ್ಕೆ ಮೆಚ್ಚುಗೆ ಗಿಟ್ಟಿಸಿಕೊಂಡರು. ಭರತನಾಟ್ಯ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಗಾಯಕರಾಗಿ ಖ್ಯಾತರೆನಿಸಿಕೊಂಡಿರುವ ಕರ್ನಾಟಕ ಕಲಾಶ್ರೀ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ ಅವರ ಸಿರಿಕಂಠ, ನರ್ತಕಿ ಸ್ಮೃತಿ ಅವರ ನಾಟ್ಯಕ್ಕೆ ಇನ್ನಷ್ಟು ಮೆರಗು ತಂದಿತು. ಕರ್ನಾಟಕ ಸಂಗೀತವನ್ನೂ ಅಭ್ಯಸಿಸುತ್ತಿರುವ ಸ್ಮೃತಿ ಬಹಳ ಜಾಣತನದಿಂದ ನಿರ್ವಹಿಸಿದರು. ಆಳ್ವಾರ್ ಪರಂಪರೆಯನ್ನು ನೆನಪಿಸಿಕೊಳ್ಳುವಲ್ಲಿಯೂ ಈ ಸಂದರ್ಭ ನೆರವಾಯಿತು.
ಸಾಮಾನ್ಯವಾಗಿ ರಂಗಪ್ರವೇಶದ ಪ್ರತಿಯೊಂದು ಪ್ರಸ್ತುತಿಯ ಆಯ್ಕೆಯೂ ನರ್ತಕಿಯ ಗುರು, ಗುರುವಿನ ಗುರು ಮತ್ತು ಅವರು ಪಾಲಿಸಿಕೊಂಡು ಬಂದಿರುವ ಪರಂಪರೆಗೆ ಅನುಗುಣವಾಗಿಯೇ ಇರುವುದನ್ನು ಕಾಣುತ್ತೇವೆ. ಬೇರಿನ್ನಾವುದೇ ಪ್ರಯೋಗಕ್ಕೆ ಮುಂದಾಗುವುದಿಲ್ಲ. ಕಾರಣ ನರ್ತಕಿ ಇವುಗಳನ್ನೆಲ್ಲ ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತಾಳೆ ಎನ್ನುವುದನ್ನು ಗಮನದಲ್ಲಿ ಇರಿಸಿಕೊಂಡೇ ಈ ಪ್ರಕ್ರಿಯೆ ಸಾಗುತ್ತದೆ.
ಹರಿದಾಸ ತತ್ವಜ್ಞಾನಿ ಪುರಂದರ ದಾಸರು ರಚಿಸಿದ ನಾಟಾ (Naatai) ರಾಗ, ಖಂಡಛಾಪು ತಾಳದಲ್ಲಿ ನಿಬಂಧಿತ ” ವಂದಿಸುವುದಾದಿಯಲಿ ಗಣನಾಥನ ” ಕೃತಿ ನರ್ತಕಿ ಸ್ಮೃತಿ ಶ್ರೀಧರ್ ಅವರ ಎರಡನೇ ಪ್ರಸ್ತುತಿಯಾಗಿತ್ತು. ಆನಂತರದ ಆಯ್ಕೆ ತ್ಯಾಗರಾಜರ ಕೃತಿ. ಗಾಯಕ ಮತ್ತು ವಾದ್ಯವೃಂದವನ್ನೂ ಪರಕಾಯ ಪ್ರವೇಶಿಸುವಂತೆ ಮಾಡುವ ಅತ್ಯಂತ ಸುಂದರ, ಭಾವಪೂರ್ಣ ಕೃತಿ “ನಗುಮೋಮು ಗಾನಲೇನಿ”. ಆಭೇರಿ ರಾಗ (22ನೇ ಮೇಳಕರ್ತ, ಕರಹರಪ್ರಿಯ ಜನ್ಯರಾಗ) ಆದಿ ತಾಳದಲ್ಲಿ ನಿಬಂಧಿತ ಕೃತಿಗೆ ಸ್ಮೃತಿ ಬಹಳ ಭಾವಪೂರ್ಣವಾಗಿ, ನೃತ್ತಪೂರ್ಣ ಪ್ರದರ್ಶನ ನೀಡಿದರು.
ಕರ್ನಾಟಕ ಕಲಾಶ್ರೀ, ವಿದ್ವಾನ್ ಜಿ. ಗುರುಮೂರ್ತಿ ಅವರು ಬಹಳ ಸೊಗಸಾಗಿ ಮೃದಂಗ ನುಡಿಸಿ ತಮ್ಮ ಅನುಭವ ಅನಾವರಣಗೊಳಿಸಿದರು. ಮೃದಂಗ ವಾದ್ಯವಿಲ್ಲದೇ ಭರತನಾಟ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಭರತನಾಟ್ಯಕ್ಕೆ ಮೃದಂಗದ ನಾದ ಇರಬೇಕೆನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ನರ್ತಕಿಯ ಚಲನೆ, ಭಾವಾಭಿನಯ ಮತ್ತು ಹೆಜ್ಜೆಗೆ ಹೊಂದಿಸಿಕೊಂಡು, ಮನೋಧರ್ಮಕ್ಕೂ ಧಕ್ಕೆಯಾಗದ ರೀತಿಯಲ್ಲಿ ನಿರ್ವಹಿಸುವ ಕೌಶಲ್ಯ ಇಡೀ ಪ್ರಸ್ತುತಿಯನ್ನು ಪ್ರೇಕ್ಷಕರ ಮನದಾಳಕ್ಕಿಳಿಸಿ ಭಕ್ತಿಯ ಸಾಗರದಲ್ಲಿ ಮುಳುಗೇಳುವಂತೆ ಮಾಡಿತು.
ಸ್ಮೃತಿ ಶ್ರೀಧರ್ ಅವರು ರಂಗಪ್ರವೇಶದ ಪ್ರಮುಖ ಭಾಗ ಎಂದೇ ಪರಿಗಣಿಸಲಾದ, ರಾಗದ ಪ್ರಮುಖ ಲಕ್ಷಣಗಳನ್ನು ಒಳಗೊಂಡಿರುವ ವರ್ಣಂ ಹಾಗೂ ಪದ ವರ್ಣದ ಮೂಲಕ ನರ್ತಕಿಯೊಬ್ಬರಿಗೆ ಇರಬೇಕಾದ ಸಾಮರ್ಥ್ಯ ಇದೆ ಎನ್ನುವುದನ್ನು ಬಹಳ ಗಟ್ಟಿಯಾಗಿ ನಿರೂಪಿಸಿದರು. ರಾಗಮಾಲಿಕಾ, ಆದಿ ತಾಳದಲ್ಲಿರುವ (12 ಆಳ್ವಾರ್‌ಗಳ ಪೈಕಿ ಒಬ್ಬರಾದ ಆಂಡಾಳ್ ಅವರ ರಚನೆ) 140 ಪದ್ಯಗಳನ್ನು ಒಳಗೊಂಡಿರುವ ನಾಚ್ಚಿಯಾರ್ ತಿರುಮೊಳಿ ವರ್ಣಂ ಹಾಗೂ ಷಣ್ಮುಗಪ್ರಿಯ ರಾಗ, ಆದಿ ತಾಳದಲ್ಲಿ ಸಂಯೋಜಿಸಲಾದ ಲಾಲ್ಗುಡಿ ಜಯರಾಮನ್ ರಚಿಸಿರುವ ಪದ ವರ್ಣವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಯಾವುದೇ ಹಂತದಲ್ಲಿ ದೈಹಿಕ ಸಾಮರ್ಥ್ಯ ಕ್ಷೀಣಿಸದಂತೆಯೇ ನೋಡಿಕೊಂಡರು. ಅಂಗ ಶುದ್ಧಿ, ಭಾವಾಭಿವ್ಯಕ್ತಿಯನ್ನೂ ಸುಲಲಿತವಾಗಿಯೇ ನಿಭಾಯಿಸಿದರು. ಎತ್ತರದ ದೇಹದವರಾದ್ದರಿಂದ ಕೆಲವೊಂದು ನೃತ್ತ ನಿರ್ವಹಣೆಯಲ್ಲಿ ಎಡವಿಬಿಡಬಹುದೆನ್ನುವ ನಿರೀಕ್ಷೆ ಸುಳ್ಳಾಗಿಸಿದರು. ವರ್ಣಂನ ಕ್ಲಿಷ್ಣಕರವೆನಿಸುವ ನೃತ್ತ ಭಾಗದಲ್ಲಿ ಸ್ಮೃತಿ ಸೊಗಸಾಗಿ, ಜಾಣತನದಿಂದ ಹೆಜ್ಜೆ ಇಟ್ಟರು. ಇದಕ್ಕೆ ಕೊಳಲು ವಾದಕರಾದ ವಿದ್ವಾನ್ ನಿತೀಶ್ ಅಮ್ಮಣ್ಣಾಯ, ವೀಣಾ ವಾದಕರಾದ ವಿದ್ವಾನ್ ಗೋಪಾಲ್ ವೆಂಕಟರಮಣ, ರಿದಂ ಪ್ಯಾಡ್ ನಿರ್ವಹಿಸಿದ ವಿದ್ವಾನ್ ಡಿ.ವಿ.ಪ್ರಸನ್ನಕುಮಾರ್ ಅವರ ಸಾಥ್ ಒಟ್ಟಾರೆ ಪ್ರಸ್ತುತಿಯ ಮೆರಗು ಹೆಚ್ಚಿಸಿತು. ನಾಗರಾಜ್ ಮರಿಹೊನ್ನಯ್ಯ ಅವರ ಬೆಳಕು ಸೇರಿದಂತೆ ಪ್ರಸಾದನ ಅತ್ಯಂತ ಪೂರಕವೆನಿಸಿತು. ಗುಣಮಟ್ಟದ ನರ್ತನಕ್ಕೆ ಕಾರಣವಾಯಿತು. ಕೂರಂ ರಮಣನ್ ರಂಗಾಚಾರಿ ರಚಿತ, ಚಾರುಕೇಶಿ ರಾಗ ಆದಿ ತಾಳದಲ್ಲಿ ನಿಬಂಧಿರ “ರಾಮಾನುಜ ಎಂಗಲ್ ರಾಮಾನುಜ” ಕೃತಿ ಪ್ರಸ್ತುತಿಯೊಂದಿಗೆ ಮೊದಲಾರ್ಧದ ಪ್ರದರ್ಶನ ಯಶಸ್ವಿಗೊಳಿಸಿದರು.
ದ್ವಿತೀಯಾರ್ಧದಲ್ಲಿ ಸಾಂದರ್ಭಿಕವಾಗಿ ಎದುರಾದ ಕೆಲವೊಂದು ಅಡಚಣೆಗಳ ನಡುವೆಯೂ ಸ್ಮೃತಿ ಎಲ್ಲಿಯೂ ತಮ್ಮ ಮನಸೋಲ್ಲಾಸಕ್ಕೆ ಚ್ಯುತಿ ಬರದಂತೆ ನೋಡಿಕೊಂಡು ನೃತ್ಯ ಪ್ರದರ್ಶಿಸಿದರು. ರಂಗಪ್ರವೇಶ ಕಾರ್ಯಕ್ರಮ ಎಂದಾಗ ತಮ್ಮ ಯಶಸ್ಸಿಗೆ ಕಾರಣರಾದವರನ್ನು, ಆಹ್ವಾನಿಸಿರುವ ಅತಿಥಿಗಳನ್ನು ಗೌರವಿಸುವುದು ಲೋಕರೂಡಿ. ಸ್ಮೃತಿ ಇದನ್ನು ಬಹಳ ತಾಳ್ಮೆಯಿಂದ ನಿರ್ವಹಿಸಿದರು. ಬಳಿಕ ಪುರಂದರ ದಾಸರು ರಚಿಸಿದ, ಮೋಹನ ರಾಗ, ತ್ರಿಪುಟಾ ತಾಳದಲ್ಲಿ ನಿಬಂಧಿತ ಜನಪ್ರಿಯ ದೇವರನಾಮ “ಪಿಳ್ಳಂಗೋವಿಯ” ಪ್ರಸ್ತುತಿ ಪ್ರೇಕ್ಷಕರಲ್ಲಿ ಭಕ್ತಿಯ ಭಾವ ಹೆಚ್ಚಿಸಿತು. ಅತ್ಯಂತ ಭಾವಪೂರ್ಣ ಪ್ರಸ್ತುತಿ ಇದಾಗಿತ್ತು. ಆನಂತರ ಆದಿ ಶಂಕರಾಚಾರ್ಯ ವಿರಚಿತ, ರಾಗಮಾಲಿಕೆ, ಆದಿ ತಾಳದಲ್ಲಿ ನಿಬಂಧಿತ “ಅರ್ಧನಾರೀಶ್ವರ” ಸ್ತೋತ್ರ ನರ್ತನ ಹಾಗೂ ಸಂಗೀತ, ನೃತ್ಯ ಸಂಯೋಜನೆ ಅನನ್ಯ. ವಿದ್ವಾನ್ ಬಾಲಸುಬ್ರಹ್ಮಣ್ಯ ಅವರ ಸಂಗೀತ ಸಂಯೋಜನೆಗೆ ಗುರು ರಕ್ಷಾ ಕಾರ್ತಿಕ್ ಅವರು ನೃತ್ಯ ಸಂಯೋಜಿಸಿದ್ದಾರೆ. ಕಾರ್ಯಕ್ರಮದ ಅಂತ್ಯದಲ್ಲಿ ಮುತ್ತುಸ್ವಾಮಿ ದೀಕ್ಷಿತ್ ಅವರು ರಚಿಸಿದ ಸಾಮಾ ರಾಗ, ಆದಿ ತಾಳದಲ್ಲಿ ನಿಬಂಧಿತ ಕೃತಿ “ಅನ್ನಪೂರ್ಣೇ”, ಅಂತ್ಯದಲ್ಲಿ ಲಾಲ್ಗುಡಿ ಜಯರಾಮ್ ಅವರ ರಚನೆಯ ದೇಶ್ ರಾಗದ ತಿಲ್ಲಾನಕ್ಕೆ ಹೆಜ್ಜೆ ಹಾಕಿ ಕಾರ್ಯಕ್ರಮ ಸಂಪನ್ನಗೊಳಿಸಿದರು.
ನರ್ತಕಿಯ ಹೆಸರಲ್ಲೇ ಇರುವಂತೆ ರಂಗಪ್ರವೇಶ ಪ್ರದರ್ಶನದ ಒಂದೊಂದು ಪ್ರಸ್ತುತಿಯೂ ‘ಸ್ಮೃತಿ’ಯಲ್ಲಿ ಉಳಿಯುವಂತೆ ಮಾಡಿದರು ಸ್ಮೃತಿ. ಬಹುಶಃ ಅಭಿನಯದ ಮತ್ತು ಆಂಗಿಕಾಭಿನಯದ ಇನ್ನಷ್ಟು ವೃತ್ತಿಪರ ಸೂಕ್ಷ್ಮಗಳನ್ನು ಹೆಚ್ಚೆಚ್ಚು ಅಭ್ಯಸಿಸಿ, ಅಳವಡಿಸಿಕೊಂಡಲ್ಲಿ ಸ್ಮೃತಿ ಭವಿಷ್ಯ ನೃತ್ಯಾಲಂಕೃತ ಎಂದರೆ ಅತಿಶಯೋಕ್ತಿ ಆದೀತು. ಆದರೆ, ಪ್ರೌಢ ನೃತ್ಯಗಾತಿಯಾಗಿ ಹೊರಹೊಮ್ಮುವುದರಲ್ಲಿ ಯಾವ ಸಂದೇಹವಿಲ್ಲ.
ಅಭಿನಂದನೆಗಳು ಸ್ಮೃತಿ ಶ್ರೀಧರ್ ಅವರಿಗೆ. ಹೆಚ್ಚೆಚ್ಚು ನೃತ್ಯಾವಕಾಶಗಳು ನಿಮ್ಮದಾಗಲಿ.

Share This

Leave a Reply

Your email address will not be published. Required fields are marked *