15ರ ಸಂಭ್ರಮದಲ್ಲಿ ಬೆಂಗಳೂರು NGMA!

Share This

    ಬೆಂಗಳೂರಿನಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್(NGMA)ಗೆ ಈಗ 15ರ ಸಂಭ್ರಮ. 100 ವರ್ಷ ಹಳೆಯದಾದ ಮಾಣಿಕ್ಯವೇಲು ಭವನವು (Manikyavelu Mansion) ಗ್ಯಾಲರಿಯಾಗಿ 2009ರಲ್ಲಿ ಉದ್ಘಾಟನೆಯಾಗಿ 15ವರ್ಷ ಪೂರೈಸಿದೆ.
    ರಾಜಾ ರವಿವರ್ಮ, ಅಮೃತಾ ಶೇರ್ಗಿಲ್, ರವೀಂದ್ರನಾಥ ಠಾಗೋರ್, ಜಾಮಿನಿ ರಾಯ್ ಸೇರಿದಂತೆ ಭಾರತೀಯ ನವ್ಯ ಕಲಾಪರಂಪರೆಗೆ ನಾಂದಿ ಹಾಡಿ ಇತಿಹಾಸ ಸೃಷ್ಟಿಸಿರುವ ಅನೇಕ ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ NGMA, ನವದೆಹಲಿ, ಮುಂಬೈ ಬಳಿಕ ಮೂರನೇ ಸುಸಜ್ಜಿತ ಗ್ಯಾಲರಿ ಅನಿಸಿಕೊಂಡಿದೆ.
| ಐತಿಹಾಸಿಕ ಕಟ್ಟಡ |
    ಐತಿಹಾಸಿಕ ಕಟ್ಟಡ. 100 ವರ್ಷಕ್ಕೂ ಹಳೆಯದಾದ ಕಟ್ಟಡ ಇಂದಿಗೂ ಸುಸಜ್ಜಿತವಾಗಿದೆ.
ಈ ಕಟ್ಟಡ ಅನೇಕ ಮಾಲೀಕರನ್ನು ಕಂಡಿರುವ ಇತಿಹಾಸ ಹೊಂದಿದೆ. ವ್ಯಾಪಾರಸ್ಥರಾಗಿದ್ದ ಹಾಜಿ ಸರ್ ಇಸ್ಮಾಯಿಲ್ ಸೇಠ್ ಅವರು ಈ ಕಟ್ಟಡ ಕಟ್ಟಿಸಿ, ” ಇಸ್ಮಾಯ್ಲಿಯಾ (Ismailia)” ಎಂದು ನಾಮಕರಣ ಮಾಡಿದ್ದರಂತೆ. ಆದರೆ ಕಟ್ಟಡ ನಿರ್ಮಾಣ ಕಾರ್ಯ ಆಗಿದ್ದು‌ ಯಾವಾಗ ಎಂಬ ನಿಖರ ದಾಖಲೆ ಇಲ್ಲವಾದ್ದರಿಂದ 1890-1900ರ ಆಸುಪಾಸು ನಿರ್ಮಾಣ ಆಗಿರಬಹುದೆಂದು ಅಂದಾಜಿಸಲಾಗಿದೆ.
    1900ರ ದಶಕದಲ್ಲಿ ಮೈಸೂರಿನ ಯುವರಾಜರಾದ ಕಂಠೀರವ ನರಸಿಂಹರಾಜ ಒಡೆಯರ್ ಅವರು
” Ismailia ” ಖರೀದಿಸಿದರು. ಒಡೆಯರ್ ಕುಟುಂಬದ ಇತಿಹಾಸಕಾರರಾದ ರಾಮಚಂದ್ರ ಅರಸ್ ಅವರ ಪ್ರಕಾರ, ಆ ಕಾಲಘಟ್ಟದಲ್ಲಿ ಕಟ್ಟಡ ಒಂದಿಷ್ಟು ಬದಲಾವಣೆ ಕಂಡಿದೆ. 1917ರ ಸಮಯದಲ್ಲಿ ರಾಜರು ಪ್ರವಾಸದಲ್ಲಿದ್ದರು, ಆಗ ಕೆಲವೊಂದು ಒಳವಿನ್ಯಾಸ ಆಗಿವೆ ಎನ್ನಲಾಗಿದೆ.
    ಕೆಲವರ್ಷಗಳ ಬಳಿಕ ಕಟ್ಟಡದ ಮಾಲೀಕರು ಮತ್ತೆ ಬದಲಾಗಿದ್ದಾರೆ. ಬಹುದೊಡ್ಡ ವ್ಯಾಪಾರಸ್ಥರಾಗಿದ್ದ ವಿ. ಮಾಣಿಕವೇಲು ಮುದಲಿಯಾರ್ ಕೈಗೆ ಕಟ್ಟಡ ಹಸ್ತಾಂತರವಾಗಿದೆ.
    ಮುದಲಿಯಾರ್ ಅವರು ಉದ್ಯಮಿಯಾಗಿದ್ದು, ಆರಂಭದಲ್ಲಿ ಚರ್ಮದ ವಸ್ತುಗಳ ವ್ಯಾಪಾರದಲ್ಲಿ ತೊಡಗಿದ್ದರು. ಬಳಿಕ ತಾಮ್ರ, ಮ್ಯಾಂಗನೀಸ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದರು. ಅಮೆರಿಕ ಮತ್ತು ಲಂಡನ್‌ಗೆ ರಫ್ತು ವ್ಯವಹಾರ ಕೂಡ ನಡೆಸುತ್ತಿದ್ದರು. 1920ರ ದಶಕದ ಮಧ್ಯಭಾಗದಲ್ಲಿ ತಾವು ಪಡೆದುಕೊಂಡ ಕಟ್ಟಡಕ್ಕೆ “ಮಾಣಿಕವೇಲು ಮ್ಯಾನ್ಷನ್” ಎಂದು ಮರುನಾಮಕರಣ ಮಾಡಿಕೊಂಡರು ಎಂದು ಉಲ್ಲೇಖಿಸಲಾಗಿದೆ.
| ಮುದಲಿಯಾರ್ ನಿಧನ ಬಳಿಕ |
    1939ರಲ್ಲಿ ಮುದಲಿಯಾರ್ ನಿಧನರಾದರು, ನಂತರ ಆಸ್ತಿ ಅವರ ಪುತ್ರರೊಬ್ಬರ ಕೈಸೇರಿತಾದರೂ 1964ರಲ್ಲಿ ಆದಾಯ ತೆರಿಗೆ ಬಾಕಿಯಾದ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿತು. ನಂತರ ಕಟ್ಟಡ City Improvement Trust Board ಹಸ್ತಾತರಿಸಲ್ಪಟ್ಟಿತು. ಕೆಲ ದಿನಗಳ ಬಳಿಕ Housing Board ಕೈಸೇರಿತು. 1970ರಿಂದ 1980ರ ಆರಂಭದ ತನಕವೂ ಮಾಣಿಕವೇಲು ಕಟ್ಟಡ ವಿಶ್ವಸಂಸ್ಥೆಯ Asian and Pacific Regional Centre for Transfer of Technology ಕಚೇರಿಯಾಗಿ ಕಾರ್ಯನಿರ್ವಹಿಸಿತು. 3.5 ಎಕರೆ ವಿಸ್ತೀರ್ಣದ ಜಾಗ ಬಳಿಕ ಕೆಲ ವರ್ಷಗಳ ಕಾಲ ಬಳಕೆಯೇ ಆಗುತ್ತಿರಲಿಲ್ಲ.
    ಈ ಕಟ್ಟಡ ಮತ್ತು ಸ್ಥಳ ಕಬಳಿಸಲು ಸಾಕಷ್ಟು ಪ್ರಯತ್ನಗಳು ನಡೆಯಿತಾದರೂ, ತದನಂತರ ಕಟ್ಟಡವನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ನೀಡಲಾಯಿತು. ನಾಡಿನ ಹಿರಿಯ ಕಲಾವಿದರುಗಳ ಹೋರಾಟ, ಒತ್ತಾಯದ ಪರಿಣಾಮ NGMA ಆರಂಭಕ್ಕೆ ಹಸಿರು ನಿಶಾನೆ ತೋರಲಾಯಿತು. 2006ರಲ್ಲಿ ರಿಪೇರಿ ಕಾರ್ಯ ಆರಂಭವಾಗಿ 2009ರಲ್ಲಿ NGMA ಕಾರ್ಯಾರಂಭ ಮಾಡಿತು. ಅದೇ ಕಟ್ಟಡವೀಗ “ಮಾಣಿಕ್ಯವೇಲು” ಆಗಿ ಕಲೆ-ಸಂಸ್ಕೃತಿಯ ವಿನಿಮಯಕ್ಕೆ ಸಾಕ್ಷಿಯಾಗುತ್ತಿದೆ.
| ಮನವಿ |
    ನವ್ಯ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆಯಾಗಬೇಕಾದ NGMA ಇನ್ನಷ್ಟು ಕ್ರಿಯಾಶೀಲ ಆಗಬೇಕಿದೆ. ಕಡೇ ಪಕ್ಷ ವರ್ಷಕ್ಕೆ ಒಂದು ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಕಲಾಪ್ರದರ್ಶನ ಆಯೋಜಿಸುವುದರ ಜೊತೆಗೆ, ದಕ್ಷಿಣ ಭಾರತದ ಸಮಕಾಲೀನ ಕಲಾವಿದರಿಗೆ ವೇದಿಕೆ ಮಾಡಿಕೊಡಿ. ವರ್ಷದಲ್ಲೊಂದು ಸಮಕಾಲೀನ ಕಲಾವಿದರ ಶಿಬಿರ ನಡೆಸಿ. ಇದು ಕಲಾ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಅಷ್ಟೇ ಅಲ್ಲ ಕಲಾ ತರಬೇತುದಾರರಿಗೂ ಸಹಕಾರಿ ಆಗಲಿದೆ.

Share This

Leave a Reply

Your email address will not be published. Required fields are marked *