• IIWC ಗ್ಯಾಲರಿಯಲ್ಲಿ ಕಾವ್ಯ ಸೃಷ್ಟಿಸುವ ಕಲಾಪ್ರದರ್ಶನ
” Painting is poetry that is seen rather than felt, and poetry is painting that is felt rather than seen.”
ಚಿತ್ರಕಲೆ ಮತ್ತು ಕಾವ್ಯದ ಕುರಿತು ವಿಶ್ವಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾ ವಿಂಚಿ (Leonardo da Vinci) ಅವರ ಮಾತಿದು. ತರ್ಕಬದ್ಧ ಹೇಳಿಕೆ ಇದು!
” ವರ್ಣಚಿತ್ರ ಅನುಭವಿಸುವುದಕ್ಕಿಂತ ಗೋಚರಿಸುವ ಕಾವ್ಯವಾದರೆ, ಕಾವ್ಯವೊಂದು ನೋಡುವುದಕ್ಕಿಂದ ಅನುಭವಿಸಬೇಕಾದ ವರ್ಣಚಿತ್ರ” ಎಂದು ಹೇಳುವ ಮೂಲಕ ತಮ್ಮ ಸೈದ್ದಾಂತಿಕ ನಿಲುವನ್ನು ಸ್ಪಷ್ಟಪಡಿಸುತ್ತಾರೆ ವಿಂಚಿ. (ವರ್ಣಚಿತ್ರ ಅಂದರೆ ಚಿತ್ರಕಲೆ ಎಂಬ ಅರ್ಥದಲ್ಲಿ) ಅನೇಕ ಸಂದರ್ಭಗಳಲ್ಲಿ ಚಿತ್ರವೊಂದು ಅವರವರ ದೃಷ್ಟಿಕೋನಕ್ಕೆ ಅನುಗುಣವಾಗಿ ಹತ್ತಾರು ಕಾವ್ಯ ಸೃಷ್ಟಿಗೆ ಕಾರಣವಾಗುವುದುಂಟು. ಹಾಗೇ ಕಾವ್ಯವೂ ಆದೀತು.
ಚಿತ್ರಕಲೆ ಮತ್ತು ಕಾವ್ಯದ ವಿಚಾರ ಬಂದಾಗ ಹೀಗೊಂದು ಮಾತಿದೆ. ಅದೇನೆಂದರೆ…
“ರೇಖೆ(line)ಯೊಂದು ಸಾಗುವ ಪ್ರಕ್ರಿಯೆ (process) ನಿಶ್ಚಿತವೆನಿಸುವ ಅರ್ಥವನ್ನು ಹೊಂದದೇ ಹತ್ತಾರು ಕಾವ್ಯ ಸೃಷ್ಟಿಸಲಿದೆ. ಹಾಗೇ ಭಾಷೆಯಿಂದ ಸೃಷ್ಟಿಯಾಗುವ ಕಾವ್ಯವೊಂದು ನಿಶ್ಚಿತವಾದ ಅರ್ಥ ಕಲ್ಪಿಸುತ್ತಲೆ ಸಾಗುತ್ತದೆ” ಎಂದು. ಈ ಬಗ್ಗೆ ಭಿನ್ನಾಭಿಪ್ರಾಯವೂ ಇರಬಹುದು. ಅಂದಹಾಗೆ ಚಿತ್ರಕಲೆ ಮತ್ತು ಕಾವ್ಯ ಈ ಎರಡರ ಉದ್ದೇಶ ಸಂವಹನ ಮಾತ್ರ. ಬೇರೆ ಬೇರೆ ಅನಿಸುವುದೇ ಇಲ್ಲ. ಸಾಮಾನ್ಯವಾಗಿ ಚಿತ್ರವೊಂದನ್ನು ಅರ್ಥೈಸಿಕೊಳ್ಳಲು ಮುಂದಾದ ಸಂದರ್ಭದಲ್ಲಿ ಅದು ಸೀಮಿತತೆ ಮೀರಿ ನಿಲ್ಲುತ್ತದೆ. ವೀಕ್ಷಕನ ಭಾವ, ಕಲ್ಪನೆ ಮತ್ತು ನೋಡುವ ಸಂದರ್ಭಕ್ಕೆ ಅನುಸಾರವಾಗಿ ಬದಲಾದ ಅರ್ಥವನ್ನೂ ಕೊಡಬಲ್ಲದು.
| ” Tribute to Ramanujan ” |
ರಸಾನುಭವ ಒದಗಿಸುವ, ಚಿತ್ರಕಲೆ ಮತ್ತು ಸಾಹಿತ್ಯ ಸಂಗಮ ಪ್ರತಿಬಿಂಬಿಸುವ ಕಲಾಪ್ರದರ್ಶನ ಬಸವನಗುಡಿಯ Indian Institute of World Culture ಗ್ಯಾಲರಿಯಲ್ಲಿ ಆರಂಭಗೊಂಡಿದೆ. ನಾಡಿನ ಖ್ಯಾತ ಕಲಾವಿದರಾದ ಎಸ್.ಜಿ. ವಾಸುದೇವ್ ಅವರು ಖ್ಯಾತ ಕವಿ ಎ.ಕೆ.ರಾಮಾನುಜನ್ ಅವರ ಕವನಗಳಿಗೆ ರಚಿಸಿರುವ ರೇಖಾಚಿತ್ರಗಳ ” Tribute to Ramanujan ” ಕಲಾಪ್ರದರ್ಶನವನ್ನು ನಿನ್ನೆ ಶುಕ್ರವಾರ (15/03/2024) ರಂಗಕರ್ಮಿ ಪ್ರಕಾಶ್ ಬೆಳವಾಡಿ, ಅನುವಾದಕಿ ವನಮಾಲಾ ವಿಶ್ವನಾಥ್, ಕಲಾವಿದರಾದ ಎ.ಎಂ.ಪ್ರಕಾಶ್ ಹಾಗೂ ಆರ್ಟ್ ಹಿಸ್ಟೋರಿಯನ್ ಡಾ. ಪ್ರಮಿಳಾ ಲೋಚನ್ ಅವರು ಉದ್ಘಾಟಿಸಿದರು.
ಅತ್ಯಂತ ಸರಳ ರೇಖೆಗಳಿಂದ ಕೂಡಿರುವ ಈ ‘ಕಾವ್ಯಚಿತ್ರಾಭಿವ್ಯಕ್ತಿ’ ಎಸ್. ಜಿ. ವಾಸುದೇವ್ ಅವರ ಆ ದಿನಗಳ ಸರಣಿ ಕಲಾಕೃತಿಗಳಾಗಿ ಹೊಸ ಪುಟಗಳನ್ನು ತೆರೆದಿಡುತ್ತವೆ. ಭಾವ, ಕಲ್ಪನೆಗಳ ಸಮ್ಮಿಳಿತವನ್ನು ಸರಳ ರೇಖೆಗಳಲ್ಲಿ ಹೇಳುವ ಒಂದು ಅಪರೂಪದ ಪ್ರಯತ್ನ ವಾಸುದೇವ್ ಅವರಿಂದ ಆಗಲು ರಾಮಾನುಜನ್ ಕವನಗಳು ಪ್ರೇರೇಪಿಸಿವೆ.
| ಕಾವ್ಯ- ಚಿತ್ರ ಸಂವಾದ! |
ಕಲಾಪ್ರದರ್ಶನ ಉದ್ಘಾಟನೆ ಬಳಿಕ ನಡೆದ ಸಂವಾದದಲ್ಲಿ ಪ್ರಕಾಶ್ ಬೆಳವಾಡಿ, ವನಮಾಲಾ ವಿಶ್ವನಾಥ್, ಎ.ಎಂ.ಪ್ರಕಾಶ್ ಅವರು ಪಾಲ್ಗೊಂಡಿದ್ದರು. ರಾಮಾನುಜನ್ ಮತ್ತು ವಾಸುದೇವ್ ಅವರ ಕಾವ್ಯ -ಚಿತ್ರ ಮಿಲನದ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ಡಾ. ಪ್ರಮಿಳಾ ಲೋಚನ್ ಅವರು ರಾಮಾನುಜನ್ ಅವರು ಸಾಗಿಬಂದ ದಾರಿಯ ಬಗ್ಗೆ ಪರಿಚಯಿಸಿ, ಸಂವಾದ ನಿರ್ವಹಿಸಿದರು.