ಮುದ್ರಣ ಕಲಾಕೃತಿಗಳ ಬದ್ಧತೆಗೆ ನಿದರ್ಶನ!

Share This

• ಸುರಂಜನ್ ಬಸು ಅವರ ಕಲಾಕೃತಿಗಳ ‘ದಿಗ್ಧದರ್ಶನ’
• ಚಿತ್ರಕಲಾ ಪರಿಷತ್ತಲ್ಲಿ ಒಂದೊಳ್ಳೆಯ ಕಲಾಪ್ರದರ್ಶನ
ಮುದ್ರಣ ಕಲೆ (printmaking) ಆರಾಧನೆಯ ಕಾಲವೊಂದಿತ್ತು. ಬಹುಶಃ ಆ ಕಾಲಘಟ್ಟದ ಮುದ್ರಣ ಕಲಾವಿದರು ಕೃತಿ ರಚನೆಯ ಕ್ಷಣವನ್ನು ಆರಾಧಿಸುವ ರೀತಿ-ನೀತಿಯನ್ನು ನಾವಿಂದು ಕಾಣಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟು ದೂರ ಸರಿದುಬಿಡುತ್ತಿದ್ದೇವೆ. ಮುದ್ರಣ ಕಲೆಯ ಪ್ರಕ್ರಿಯೆ (process) ಕಲಾವಿದರನ್ನು ಕಾಡುವ ಬಗೆ ಭಿನ್ನವಾದ್ದರಿಂದ ಅಷ್ಟೋ ಇಷ್ಟೋ ಉಳಿದುಕೊಂಡಿದೆ, ಮುಂದುವರಿದಿದೆ.
ಬದ್ಧತೆಗೆ ಕೈಗನ್ನಡಿ ಎನ್ನುವುದಕ್ಕೊಂದು ಅತ್ಯುತ್ತಮ ಉದಾಹರಣೆ ‘The Art of Suranjan Basu’ ಕಲಾಪ್ರದರ್ಶನ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಮುಖ ನಾಲ್ಕು ಗ್ಯಾಲರಿಗಳಲ್ಲಿ ನಡೆಯುತ್ತಿದ್ದು, ಅಧ್ಯಯನಕ್ಕೊಂದು ಅತ್ಯುತ್ತಮ ವೇದಿಕೆಯಾಗಿದೆ. ಅದರಲ್ಲೂ ಮುದ್ರಣ ಕಲಾಧ್ಯಯನಕ್ಕೆ ಈ ಪ್ರದರ್ಶನ ಉತ್ತಮ ನಿದರ್ಶನ. ಕೊಲ್ಕೊತದ ಸೀಗುಲ್ ಫೌಂಡೇಶನ್ (Seagull Foundation) ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಈ ಕಲಾಪ್ರದರ್ಶನ ಆಯೋಜನೆಯಾಗಿದೆ.
ಸುರಂಜನ್ ಬಸು ಅವರ ಕಲಾ ಪಯಣದ ದರ್ಶನ ಈ ಕಲಾಪ್ರದರ್ಶನದಲ್ಲಿ ಆಗಲಿದೆ. ಮುದ್ರಣ ಕಲೆಯ ಎಲ್ಲಾ ಪ್ರಕಾರಗಳಲ್ಲಿ ಅನುಭವ ಸಾಧಿಸಿಕೊಂಡಿರುವುದಕ್ಕೆ ಪ್ರದರ್ಶಿತ ಕಲಾಕೃತಿಗಳೇ ಸಾಕ್ಷಿಯಾಗಿ ನಿಲ್ಲುತ್ತವೆ. ವಿಶೇಷವಾಗಿ ಅವರ ಮರದಚ್ಚು ಕೆತ್ತನೆ (woodcut) ಮುದ್ರಣಗಳು ಗಮನಸೆಳೆಯುತ್ತವೆ. ಬೆಳೆದುಬಂದ ಪರಿಸರ ಅವರ ಮೇಲೆ ಎಷ್ಟು ಗಾಢವಾದ ಪರಿಣಾಮ ಬೀರಿದೆ ಎನ್ನುವುದನ್ನು ಈ ಕಲಾಕೃತಿಗಳಿಂದ ಅರಿಯಬಹುದಾಗಿದೆ. ಜೊತೆಗೆ ಒಂದಿಷ್ಟು ಎಚ್ಚಿಂಗ್ (etching), ಲಿಥೋಗ್ರಫಿ (lithography), ಸಿಲ್ಕ್ ಸ್ಕ್ರೀನ್ (silk screen) ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿವೆ. ಇದಲ್ಲದೆ, ಒಂದಿಷ್ಟು ರೇಖಾಚಿತ್ರ ಮತ್ತು ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಶ್ರಮಿಕರ ಪರವಾದ ಧ್ವನಿ ಅವರ ಬಹುತೇಕ ಕಲಾಕೃತಿಗಳಲ್ಲಿ ಕಂಡುಬರುತ್ತವೆ. ನಿತ್ಯ ಜೀವನದ ದೃಶ್ಯಾವಳಿಗಳನ್ನು ಆಧರಿಸಿಕೊಂಡು ತಮ್ಮದೇ ಆದ ಶೈಲಿಯಲ್ಲಿ ದುಡಿಸಿಕೊಳ್ಳುವ ಅವರ ಬದ್ಧತೆ ನಿಬ್ಬೆರಗಾಗಿಸುತ್ತವೆ.
ವುಡ್ ಕಟ್ ಮುದ್ರಣದ Dhaki ಶೀರ್ಷಿಕೆಯ ಕಲಾಕೃತಿ, Beggar Family, Problem, Jatra Make-up, Watch and Ward, Planar Construction ಶೀರ್ಷಿಕೆಗಳ ಸರಣಿ ಕಲಾಕೃತಿಗಳು ವೈಯಕ್ತಿಕವಾಗಿ ನನ್ನನ್ನು ಹಿಡಿದು ನಿಲ್ಲಿಸಿದವು. ವುಡ್ಕಟ್ನಲ್ಲಿ ವಿಶೇಷ ಅನುಭವ ಸಾಧಿಸಿದ್ದ ಸುರಂಜನ್ ಬಸು ಅವರ ಕಲಾ ಪಯಣವನ್ನು ದರ್ಶಿಸುವ ಒಂದೊಳ್ಳೆಯ ಕಲಾಪ್ರದರ್ಶನ ಇದಾಗಿದೆ.
| ಯಾರಿವರು ಸುರಂಜನ್ ಬಸು? |
ಪಶ್ಚಿಮ ಬಂಗಾಳದ ಶಾಂತಿನಿಕೇತನ ಮೂಲದವರು. ಕಲಾಭವನ, ವಿಶ್ವಭಾರತಿ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ ಇವರು, ತದನಂತರ ಎಂ.ಎಸ್. ಯನಿವರ್ಸಿಟಿಯಲ್ಲಿ ಪದವಿ ಪಡೆದು, 1970ರಿಂದಲೂ ಮುದ್ರಣ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಪರೂಪದ ಕಲಾವಿದರು. ಜ್ಞಾನ ಭಾರತಿಯಲ್ಲಿ ಒಂದಿಷ್ಟು ವರ್ಷಗಳ ಕಾಲ ಕಲಾಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಇವರು ತದನಂತರ ಕಲಾಭವನಕ್ಕೆ ಮರಳಿ ಕಲಾಭ್ಯಾಸದಲ್ಲಿ ತೊಡಗಿಕೊಂಡರು. ಬಹಳ ಮುಖ್ಯವಾಗಿ ‘The Realists’ ಗ್ರೂಪ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. 2002ರಲ್ಲಿ ವಿಧಿವಶರಾದ ಸುರಂಜನ್ ಬಸು ಅವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ.
ಸ್ನೇಹಿತರೆ, ಸೆಪ್ಟೆಂಬರ್ 27ರಂದು ಕಲಾಪ್ರದರ್ಶನ ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.

 

 

 

 


Share This

Leave a Reply

Your email address will not be published. Required fields are marked *