• Art_Heritage ಗ್ಯಾಲರಿಯಲ್ಲಿ ಗಮನಾರ್ಹ ಪ್ರದರ್ಶನ
ಅಂತರಂಗದಲ್ಲಿ ಹುಟ್ಟಿಕೊಳ್ಳುವ ಭಾವ ಹೊರಹೊಮ್ಮುವುದು ಅವರವರ ಅಭಿವ್ಯಕ್ತಿಯಲ್ಲಿ. ದೇಹದ ರಚನೆ ಈ ಕಾರಣಕ್ಕಾಗಿಯೇ ಅನೇಕ ಸಂದರ್ಭಗಳಲ್ಲಿ ಕುತೂಹಲಕಾರಿ ಅನಿಸಿಬಿಡುತ್ತದೆ.
“Emotions express themselves physically through automatic nervous system responses, distinct muscle tension patterns, and visible body language” ಎನ್ನುವಂತೆ ದೇಹದೊಳಗಿನ ನರಮಂಡಲ, ಸ್ನಾಯುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಹಾಗೂ ಭಾವನೆಗಳು ಹುಟ್ಟಿಕೊಳ್ಳುವಾಗ ಏನೆಲ್ಲಾ ಬದಲಾವಣೆ ಕಂಡುಕೊಳ್ಳುತ್ತವೆ ಎನ್ನುವುದೇ ಅದ್ಭುತ ಸೃಷ್ಟಿಯಾಗಿ ಎಚ್ಚರಿಸುತ್ತವೆ.
ನವದೆಹಲಿಯ ತ್ರಿವೇಣಿ ಸಂಗಮ ಸಮುಚ್ಚಯದಲ್ಲಿರುವ ಆರ್ಟ್ ಹೆರಿಟೇಜ್ #Art_Heritage ಗ್ಯಾಲರಿಯಲ್ಲಿ ನಡೆಯುತ್ತಿರುವ “ON THE THRESHOLD OF TIME : FUTURE TENSE” ಕಲಾಪ್ರದರ್ಶನ ಇಂತಹ ಸೂಕ್ಷ್ಮ ಭಾವನೆಗಳ ಅಭಿವ್ಯಕ್ತಿಯಾಗಿ ಕಾಣಿಸಿತು. ಅಭಿರಾಂ ಬಿ., ನಂದಿನಿ ಪಟೇಲ್, ಶಿವಾನ್ಷ್ ಶಾ ಮತ್ತು ಸೋವನ್ ಗೊರೈ ಅವರ ಕಲಾಕೃತಿಗಳು ಪ್ರದರ್ಶಿಸಲ್ಪಟ್ಟಿದ್ದವು. ಈ ನಾಲ್ವರೂ ಕಲಾವಿದರ ಭಾವ ಲಹರಿ ಬೇರೆ ಬೇರೆಯಾಗಿಯೇ ಕಾಣಿಸಿತು. ಸಮಕಾಲೀನ ಚಿಂತನೆಗಳಿಗೆ ಹೊರಳಿಕೊಳ್ಳುವ ಪ್ರಯತ್ನವೆನಿಸಿತು.
ಅಭಿರಾಂ ಅವರ ಕಲಾಕೃತಿಗಳಲ್ಲಿ ನಿತ್ಯ ಜೀವನದ ದೃಶ್ಯಾವಳಿಗಳು ಕಾಣಿಸಿವೆ. ಅವರ ಸ್ಪಂದನಾ ಭಾವ ಸ್ಪಷ್ಟ. ಶ್ರಮಜೀವಿಗಳ ಸುಃಖ-ದುಃಖ, ನಿತ್ಯ ಕಾಯಕದ ಕ್ಷಣಗಳನ್ನು ಗ್ರಹಿಸಿ ಸೆರೆಹಿಡಿಯುವ ಪ್ರಯತ್ನ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ಇನ್ನು ನಂದಿನಿ ಪಟೇಲ್ ಅವರು ನೇಯ್ಗೆಯಾದ ಬಟ್ಟೆಯ ದಾರಗಳಲ್ಲೇ ತಮ್ಮ ಕೈಚಳಕ ತೋರಿದ್ದಾರೆ. ಕಾಟನ್ ಬಟ್ಟೆ, ಜರಿ ದಾರ ಮಾಧ್ಯಮವಾಗಿಸಿಕೊಂಡು ತಮ್ಮ ಭಾವನೆಗಳಿಗೆ ಜೀವ ತುಂಬಿದ್ದಾರೆ. ಅಮೂರ್ತಾಕೃತಿಗಳು ಮೂರ್ತ ಸ್ವರೂಪಕ್ಕೆ ಹೊರಳುವಂತೆ ಮಾಡುವ ಅವರ ಶೈಲಿ ನೋಡುಗರನ್ನು ಜಾಗೃತಗೊಳಿಸುವಂತಿದೆ.
ಶಿವಾನ್ಷ್ ಶಾ ಅವರ ಕಲಾಕೃತಿಗಳು ಪ್ರಕೃತಿಗೆ ಹತ್ತಿರವಾದುದು. ತಮ್ಮದೇ ಆದ ಶೈಲಿಯಲ್ಲಿ ಭೂದೃಶ್ಯಗಳ ಸರಳ ಸೌಂದರ್ಯ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಬಣ್ಣ ಮತ್ತು ರೇಖೆಗಳು ಪರಿಣಾಮಕಾರಿ ಅನಿಸಿತು. ಭವಿಷ್ಯದ ರೇಖೆಗಳ ಬಗ್ಗೆ ಕುತೂಹಲ ಹೆಚ್ಚಿಸಿತು.
ಸೋವನ್ ಅವರ ಶಿಲ್ಪಗಳು ಅತ್ಯಂತ ಪರಿಣಾಮಕಾರಿಯಾಗಿತ್ತು. ಮಾನವ ದೇಹವನ್ನು ನೊಡುವ ಪರಿ ವಿಶೇಷವಾಗಿದೆ. ಮಾಧ್ಯಮ ಬಳಕೆಯೂ ಗಮನಸೆಳೆಯುವಂತಿವೆ. ವಿಭಿನ್ನ ಭಾವಗಳ ಹುಟ್ಟಿಗೆ ಶಿಲ್ಪಗಳು ಅರ್ಥಪೂರ್ಣ ಎನ್ನುವಷ್ಟು ಪರಿಣಾಮಕಾರಿಯಾಗಿ ದುಡಿಸಿಕೊಂಡಿದ್ದಾರೆ.
ಒಟ್ಟಾರೆ ಕಲಾಪ್ರದರ್ಶನ ಗಮನಸೆಳೆಯುವಂತೆ ಇತ್ತು. ಬಹುತೇಕ ಕಲಾಕೃತಿಗಳು ಅರೆಕ್ಷಣ ಎದುರು ನಿಲ್ಲುವಂತೆ ಮಾಡಿದವು. ಹಿತ-ಮಿತವಾದ ಪ್ರಸ್ತುತಿ ಇತ್ತು.






