ಮರೆಯಲಾಗದ ವ್ಯಕ್ತಿತ್ವದ ಕಲಾವಿದ, ರಂಗಕರ್ಮಿ ಚಂದ್ರಕಾಂತ್ ಕುಸನೂರ

Share This

ಚಂದ್ರಕಾಂತ ಕುಸನೂರ

ನಾಡಿನ ಖ್ಯಾತ ರಂಗಕರ್ಮಿ, ಕಾದಂಬರಿಕಾರ ಹಾಗೂ ಚಿತ್ರ ಕಲಾವಿದರೂ ಆಗಿದ್ದ ಚಂದ್ರಕಾಂತ ಕುಸನೂರ ಅವರು ಶನಿವಾರ ರಾತ್ರಿ ನಮ್ಮನ್ನಗಲಿದ್ದಾರೆ.
ಶ್ರೀಯುತರಿಗೆ 90 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಪುತ್ರರು, ಒರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಚಂದ್ರಕಾಂತ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ತಡರಾತ್ರಿ ನಡೆದಿದ್ದು, ಶಹಾಪುರ ಸ್ಮಶಾನದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದೆ. ಅನೇಕ ಗಣ್ಯರು ಕುಸನೂರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಚಂದ್ರಕಾಂತ ಕುಸನೂರ ಅವರು ಮೂಲತ ಕಲಬುರಗಿಯವರು. 1931ರಲ್ಲಿ ಕುಸನೂರ ಗ್ರಾಮದಲ್ಲಿ ಜನಿಸಿ ಕಳೆದ ಕೆಲವು ದಶಕಗಳಿಂದ ಬೆಳಗಾವಿಯಲ್ಲೇ ನೆಲೆಸಿದ್ದರು. ಕಲಾವಿದರಾಗಿಯೂ, ಸಾಹಿತಿಯಾಗಿಯೂ ಹಾಗೂ ರಂಗಕರ್ಮಿಯಾಗಿಯೂ ಚಿರಪರಿಚಿತರಾಗಿದ್ದರು. ಚಂದ್ರಕಾಂತ ಕುಸನೂರ ಅವರ ಯಾತನಾ ಶಿಬಿರ ಕಾದಂಬರಿಗೆ 1975ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. 1992ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 2013ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 2006ರಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಎಂ.ಎ., ಬಿ.ಇಡಿ ಪದವೀಧರರಾದ ಕುಸನೂರ ಅವರು ಚಿತ್ರಕಲಾವಿದರಾಗಿಯೂ ಗುರುತಿಸಿಕೊಂಡ ಅಪರೂಪದ ಸಾಹಿತಿ ಮತ್ತು ರಂಗಕರ್ಮಿ. ನೂರಾರು ಕಲಾಕೃತಿಗಳನ್ನು ರಚಿಸಿದ್ದಾರೆ.
ಕನ್ನಡದಲ್ಲಿ ಅಬ್ಬರ್ಡ್ ಮಾದರಿಯ ನಾಟಕಗಳನ್ನು ರಚಿಸಿದ ಅಪರೂಪದ ರಂಗಕರ್ಮಿಯಾದ ಕುಸನೂರ ಅವರು 5ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೆ, ದಿಂಡಿ, ವಿದೂಷಕ, ಹಳ್ಳ-ಕೊಳ್ಳ-ನೀರು ಇವು ಕುಸನೂರ ರಚಿತ ನಾಟಕಗಳು. ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ಕೆರೂರು ನಾಮ, ಚರ್ಚ್‍ಗೇಟ್ ಇತ್ಯಾದಿ ಕುಸನೂರ ಅವರ ಕಾದಂಬರಿಗಳು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ ಹಾಗೂ ಶ್ರೀಕೃಷ್ಣ ಆಲನಹಳ್ಳಿ ಅವರ ಕಾಡು ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ.

“ರಂಗಮಾಧ್ಯಮ”ದ ಸಂಸ್ಥಾಪಕ
ಚಂದ್ರಕಾಂತ ಕುಸನೂರ ಅವರು ಕಲಬುರಗಿಯಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ದಿನಗಳಲ್ಲಿ ಹುಟ್ಟುಹಾಕಿದ ರಂಗ ತಂಡವೇ “ರಂಗಮಾಧ್ಯಮ”. ಸ್ವತಃ ಅಬ್ಬರ್ಡ್ ಮಾದರಿಯ ನಾಟಕಗಳನ್ನು ರಚಿಸಿ ರಂಗ ಪ್ರಯೋಗ ಮಾಡುವ ಮೂಲಕ ಅಪಾರ ರಂಗಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಚಂದ್ರಕಾಂತ ಕುಸನೂರ ಅವರ ಕಲಾಕೃತಿಗಳು

ಚಿತ್ರಕಲಾವಿದರಾಗಿ ಕುಸನೂರ
“ನನ್ನ ಆತ್ಮ ಸಂತೋಷಕ್ಕಾಗಿ ಚಿತ್ರ ರಚಿಸುವುದನ್ನು ರೂಢಿಸಿಕೊಂಡಿದ್ದೇನೆ. ಹೀಗಾಗಿ ಅದೇನೋ ಚಿತ್ರ ಕಲಾವಿದ ಎಂದು ಹೇಳಿಕೊಳ್ಳಲೂ ಮುಜುಗರ” ಎಂದು ಹೇಳಿಕೊಳ್ಳುತ್ತಿದ್ದ ಚಂದ್ರಕಾಂತ ಕುಸನೂರ ಅವರು ನೂರಾರು ಕಲಾಕೃತಿಗಳನ್ನು ರಚಿಸಿ, ಪ್ರದರ್ಶಿಸಿದ್ದಾರೆ. ಹಲವು ಮಂದಿಗೆ ಅವರಲ್ಲೊಬ್ಬ ಚಿತ್ರಕಲಾವಿದನೂ ಇದ್ದಾನೆ ಎನ್ನುವುದೇ ಗೊತ್ತಿರಲಿಲ್ಲ. ಹೆಚ್ಚೆಚ್ಚು ಪ್ರದರ್ಶನಕ್ಕೂ ಒತ್ತು ಕೊಡುತ್ತಿರಲಿಲ್ಲ ಎಂಬುದು ಅವರ ಒಡನಾಡಿಗಳ ಮಾತು. ಅಮೂರ್ತ ಶೈಲಿಯಲ್ಲಿ ಸಾಕಷ್ಟು ಕಲಾಕೃತಿಗಳನ್ನು ರಚಿಸಿದ್ದಾರೆ.
ಎಸ್.ಎಂ.ಪಂಡಿತ್ ಅವರ ಕಲಾಕೃತಿಗಳನ್ನು ಇಷ್ಟ ಪಡುತ್ತಿದ್ದ ಕುಸನೂರ ಅವರು ಆ ಮೂಲಕ ಸ್ಫೂರ್ತಿ ಪಡೆದು ಚಿತ್ರ ರಚನೆಯಲ್ಲಿ ತೊಡಗಿಕೊಂಡಿದ್ದರು. ತಮ್ಮ ನಿವೃತಿಯ ದಿನಗಳಲ್ಲಿ ಹೆಚ್ಚೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಕೆಲವು ಯುವ ಕಲಾವಿದರು ಕುಸನೂರ ಅವರ ಕಲಾಕೃತಿಗಳನ್ನು ತಂದು ಪ್ರದರ್ಶನ ಏರ್ಪಡಿಸಿದ್ದರು. ಇದರಿಂದಾಗಿ ಬಹಳ ಮಂದಿಗೆ ಕುಸನೂರಲ್ಲಿ ಒಬ್ಬ ಚಿತ್ರಕಲಾವಿದನೂ ಇದ್ದಾನೆ ಅನ್ನೋದು ಗೊತ್ತಾಗುವಂತಾಯಿತು.

ಚಂದ್ರಕಾಂತ ಕುಸನೂರ ಅವರ ಕಲಾಕೃತಿ

ಶ್ರೇಷ್ಠ ವ್ಯಕ್ತಿತ್ವದ ಕಲಾವಿದ

ಚಂದ್ರಕಾಂತ್ ಕುಸನೂರ ಮತ್ತು ನಮ್ಮ ಒಡನಾಡ ಮರೆಯಲಾಗದು. ಒಂದೊಂದು ಕ್ಷಣವೂ ಈಗ ನೆನಪಿಗೆ ಬರುತ್ತಾಹೋಗುತ್ತದೆ. ಅಸಾಮಾನ್ಯ ವ್ಯಕ್ತಿತ್ವ ಅವರದ್ದು. ನಾನಾ ಭಾಷೆಗಳ ಸಾಹಿತ್ಯವನ್ನು ಓದಿ ಜ್ಞಾನ ವೃದ್ಧಿಸಿಕೊಂಡಿದ್ದರು. ಸ್ವತಃ ರಂಗಕರ್ಮಿ ಆಗಿದ್ದರಿಂದ ಸಹಜವಾಗಿಯೇ ಅಧ್ಯಯನವನು ರೂಢಿಸಿಕೊಂಡಿದ್ದರು. ಅಷ್ಟೇ ಅಲ್ಲ, ಅವರ ಅಧ್ಯಯನದ ಹೆಚ್ಚಿನ ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ನಾವೆಲ್ಲ ನಿಕಟವರ್ತಿಗಳಾಗಲು ಸಾಧ್ಯವಾಯಿತು. ಕಲಬುರಗಿಯಲ್ಲಿ ಇರುವ ಸಂದರ್ಭಗಳಿಂದಲೂ ನಮಗೆ ಅವರ ಸ್ನೇಹ ಸಿಕ್ಕಿದೆ. ಗಿರಡ್ಡಿ ಗೋವಿಂದ ರಾಜು ಅವರೊಂದಿಗೆ ಕುಸನೂರ ಅವರ ಒಡನಾಟ ಸಾಕಷ್ಟಿತ್ತು. ಆ ದಿನಗಳಲ್ಲಿಯೇ ನಮ್ಮನ್ನು ಮೆಚ್ಚಿಕೊಂಡು, ನಮಗೂ ರಂಗದ ಜೊತೆ ನಂಟು ಬೆಳೆಸಿದ್ದರು. ಅವರ ನಿಧನ ಆಘಾತ ಉಂಟುಮಾಡಿದೆ. ನಾಡಿನ ಹಿರಿಯ ಮತ್ತು ಶ್ರೇಷ್ಠ ವ್ಯಕ್ತಿಯೊಬ್ಬರನ್ನು ಕಳೆದಕೊಂಡಿದ್ದೇವೆ. ದೇವರು ಅವರಿಗೆ ಶಾಂತಿ ನೀಡಲಿ.

  • ಮಧು ದೇಸಾಯಿ ಮತ್ತು ಗಾಯತ್ರಿ ದೇಸಾಯಿ ಕಲಾವಿದರು, ಧಾರವಾಡ

“ಕಲಾವಿದರು, ಸಾಹಿತಿಗಳ ಜೊತೆ ಇರಬೇಕು ಎಂದು ಬಯಸುತ್ತಿದ್ದರು”

ಡಿ.ಎಸ್.ಚೌಗಲೆ

ಚಂದ್ರಕಾಂತ ಕುಸನೂರ ಅವರು ಆಂಗ್ಲ, ಉರ್ದು, ಮರಾಠಿ ಸಾಹಿತ್ಯದಲ್ಲೂ ಹೆಚ್ಚಿನ ಒಲವು ಇಟ್ಟುಕೊಂಡಿದ್ದರು. ಅಧ್ಯಯನ ಶೀಲ ಸಾಹಿತಿ, ರಂಗಕರ್ಮಿ ಅವರು. ಅದೇ ಕಾರಣಕ್ಕಾಗಿಯೇ ಅವರಿಗೆ ಪಾಶ್ಚಿಮಾನ್ಯ ಚಿತ್ರಕಲೆಯ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದರೇನೋ ಎಂದು ಅನಿಸಿದ್ದೂ ಇದೆ. ಈ ಕೆಲವು ಅಂಶಗಳ ಬಗ್ಗೆ ಅವರೊಂದಿಗೆ ಬಹಳ ಚರ್ಚೆ ನಡೆಸಿದ್ದೇನೆ. ಅವರು ಹೇಳುವ ಸಾಕಷ್ಟು ಅಂಶಗಳ ಬಗ್ಗೆ ಅವರೊಂದಿಗೆ ತರ್ಕ ನಡೆಸಿದ್ದಿದೆ. ಆದರೆ ನಮ್ಮ ಒಂದೊಂದೂ ಪ್ರಶ್ನೆಗೂ ಅವರು ಮುಗುಳ್ನಕ್ಕೂ ಅದಕ್ಕೊಂದು ಉತ್ತರ ನೀಡುತ್ತಿದ್ದರು. ಪೂರಕವಾದ ವಿಚಾರವನ್ನು ನಮ್ಮ ಮುಂದಿಡುತ್ತಿದ್ದರು.
ಚಂದ್ರಕಾಂತ ಕುಸನೂರ ಅವರು ನನ್ನ ನಾಟಕಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ನನ್ನ ದಿಶಾಂತರ ನಾಟಕಗಳನ್ನು ನೋಡಿ ಬೆನ್ನು ತಟ್ಟಿದ್ದರು. ಸ್ವತಃ ನಾಟಕಕಾರರಾಗಿ, ಸಾಹಿತಿಯಾಗಿರುವ ವ್ಯಕಿಯೊಬ್ಬರು ಬೆನ್ನುತಟ್ಟಿದಾಗ ಅದು ಬಹಳ ಆಪ್ತವೆನಿಸಿದ ಕ್ಷಣ. ಕುಸನೂರ ಅವರು ಬಹಳ ನೇರ ನುಡಿಯವರು. ತಾವು ಏನನ್ನು ಹೇಳಬೇಕೋ ಅದನ್ನು ವೇದಿಕೆಯ ಮೇಲೆ ನೇರವಾಗಿ ಹೇಳಿಬಿಡುವ ವ್ಯಕ್ತಿತ್ವದವರು. ಸ್ವಂತ ಪರಿಶ್ರಮದಿಂದ ಮೇಲೆ ಬಂದವರನ್ನು ಮೆಚ್ಚಿಕೊಳ್ಳುವ ವ್ಯಕ್ತಿತ್ವದವರಾಗಿದ್ದರು. ಸದಾಕಾಲ ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳ ಜೊತೆಯಲ್ಲೇ ಇರಬೇಕೆಂದು ಬಯಸುವ ಸಹ್ರದಯಿಯಾಗಿದ್ದರು.
ಕುಸನೂರ ಅವರ ನಾಟಕಗಳನ್ನು ಓದಿದ್ದೇನೆ. ಎಷ್ಟೋ ಸಂದರ್ಭಗಳಲ್ಲಿ ಅವರನ್ನು ಕನ್ನಡನಾಡು ಶ್ರೇಷ್ಠ ನಾಟಕಕಾರರಾಗಿ ನೋಡಿಲ್ಲವೇನೋ ಅನಿಸಿದ್ದಿದೆ. ಅವರ ನಾಟಕಗಳು ರಂಗದ ಮೇಲೆ ಹೆಚ್ಚೆಚ್ಚು ಪ್ರದರ್ಶನಗೊಳ್ಳಬೇಕಿತ್ತು ಎನಿಸಿದ್ದಿದೆ. ಈಗಲೂ ಈ ವಿಚಾರದಲ್ಲಿ ಕುಸನೂರ ಅವರ ನಾಟಕಗಳು ಇನ್ನಷ್ಟು ಪ್ರಾಮುಖ್ಯತೆ ಪಡೆಯಬೇಕಿತ್ತು ಅನಿಸುವುದುಂಟು. ನಾಡಿನ ಅಗ್ರಸಾಲಿನಲ್ಲಿರಬೇಕಾದ ನಾಟಕಕಾರದಲ್ಲಿ ಅವರೂ ಒಬ್ಬರು ಎನ್ನುವುದು ನನ್ನ ಭಾವನೆ ಕೂಡ.
ಚಂದ್ರಕಾಂತ ಕುಸನೂರ ಅವರ ಬಹುತೇಕ ಕಲಾಕೃತಿಗಳನ್ನು ನೋಡಿದ್ದೇನೆ. ಅವರ ಕಲಾಕೃತಿಗಳಲ್ಲಿ ಪಾಶ್ಚಿಮಾತ್ಯ ಕಲಾಕೃತಿಗಳಿರುವಂತೆ ಗಾಢವಾದ ಬಣ್ಣಗಳು ಕಾಣಿಸುತ್ತವೆ. ಒಮ್ಮೆ ಈ ಬಗ್ಗೆ ಅವರಲ್ಲಿ ಪ್ರಶ್ನೆ ಮಾಡಿದ್ದೆ. ಆಗ ಅವರು ಬದುಕಿನ ಗಾಢತೆಯನ್ನು ಚಿತ್ರಿಸಬೇಕೆನ್ನಿಸುತ್ತದೆ. ಹಾಗಾಗಿ ಗಾಢವಾದ ಬಣ್ಣಗಳೇ ನನ್ನ ಆಯ್ಕೆಯಾಗಿರುತ್ತದೆ ಎಂದಿದ್ದರು. ಹೀಗೆ ಚಿತ್ರಗಳ ರಚನೆಯಲ್ಲೂ ಅವರ ಕೆಲವೊಂದು ಅಧ್ಯಯನ ಶೀಲತೆ ಮೆಚ್ಚಿಕೊಳ್ಳುವಂತದ್ದು.

  • ಡಿ.ಎಸ್.ಚೌಗಲೆ ಕಲಾವಿದರು, ಲೇಖಕರು, ಬೆಳಗಾವಿ

ಯುವ ಕಲಾವಿದರ ಬಗ್ಗೆ ಅವರಿಗೆ ಬಹಳ ಕಾಳಜಿ ಹೊಂದಿದ್ದರು

ದಿಲೀಪ್‍ಕುಮಾರ್ ಕಾಳೆ

ನಾನು ಚಿತ್ರಕಲಾ ವಿದ್ಯಾರ್ಥಿ ಆದಾಗಿನಿಂದ ಸುಮಾರು ಮೂವತ್ತು ವರ್ಷಗಳ ಹಿಂದಿನ ಪರಿಚಯ ಅವರದ್ದು. ಕನ್ನಡ ಮರಾಠಿ ಹಿಂದಿ ಉರ್ದು ಹಾಗೂ ಇಂಗ್ಲಿಷ್ ಭಾಷೆಗಳ ಮೇಲೆ ಅಪಾರವಾದ ಹಿಡಿತ ಹೊಂದಿದ್ದರು. ನನಗೆ ಕುಸನೂರ ಅವರು ಬಹಳ ಇಷ್ಟ ಆಗೋದು ಎರಡು ಕಾರಣಕ್ಕೆ. ಒಂದು ಅವರು ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೆಲ್ಲ ಕೆಲಸ ಮಾಡಿದ್ದರೂ ಚಿತ್ರಕಲಾ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು. ನಾನು ವಿದ್ಯಾರ್ಥಿಯಾಗಿದ್ದಾಗ ತೊಂಬತ್ತರ ದಶಕದಲ್ಲಿ ಬೆಳಗಾವಿ ಹಾಗೂ ಗಡಿ ಭಾಗದಲ್ಲಿ ಕಲಾ ಚಟುವಟಿಕೆಗಳೇ ಇಲ್ಲದ ಸ್ಥಿತಿ ಇತ್ತು. ಆ ನಡುವೆ ಜಿಲ್ಲೆಯ ಚಿತ್ರಕಲಾವಿದರನ್ನು ಒಗ್ಗೂಡಿಸಿಕೊಂಡು ಅನೇಕ ಕಲಾ ಪ್ರದರ್ಶನಗಳನ್ನು ಕಾರ್ಯಾಗಾರಗಳನ್ನು ಏರ್ಪಡಿಸುವುದರ ಮೂಲಕ ಕಲೆಯ ಅಭಿರುಚಿ ಬೆಳೆಸುವಲ್ಲಿ ಸಫಲರಾಗಿದ್ದರು. ಇವರ ಈ ಪ್ರಯತ್ನದ ಫಲವಾಗಿ ಅಂದು ಪೇಂಟಿಂಗ್ ಲೈಬ್ರೆರಿ ಅನ್ನುವ ಒಂದು ವಿಶೇಷವಾದ ಕಾನ್ಸೆಪ್ಟ್ ಮೂಲಕ ಅನೇಕ ಕಲಾಪ್ರೇಮಿಗಳನ್ನು ಹುಟ್ಟು ಹಾಕಿದ್ದರು. ಬೆಳಗಾವಿಯಲ್ಲಿ ಕಲೆಯ ಕುರಿತಾದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಇರುತ್ತಿದ್ದರು. ವಿಶೇಷವಾಗಿ ಯುವ ಕಲಾವಿದರ ಬಗ್ಗೆ ಅವರಿಗೆ ಬಹಳ ಒಳ್ಳೆಯ ಅಭಿಪ್ರಾಯ ಇತ್ತು. ಹೀಗಾಗಿ ಅವರು ಯುವಕರೊಂದಿಗೆ ಕಲೆಯ ಕುರಿತು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಬೆಳಗಾವಿಯಲ್ಲಿ ಕಲಾವಿದರಿರಲಿ, ಸಾಹಿತಿಗಳಾಗಲಿ, ರಂಗಕರ್ಮಿಗಳಾಗಲಿ ಯಾರೆ ಇದ್ದರೂ ಯಾವುದಾದರೂ ವಿಷಯ ಕುರಿತು ಹೆಚ್ಚಿನ ತಿಳಿವಳಿಕೆ ಬೇಕಿದ್ದಲ್ಲಿ ಎಲ್ಲರೂ ನೇರವಾಗಿ ಹೋಗುವುದು ಕುಸನೂರ ಅವರ ಮನೆಗೆ. ಎಷ್ಟೊತ್ತಿಗೆ ಅವರ ಮನೆಗೆ ಹೋದರೂ ಸಹ ಸದಾ ನಗುಮುಖದಿಂದ ಬರಮಾಡಿಕೊಂಡು ಅವರ ಜೊತೆ ಚರ್ಚಿಸಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.
ಎರಡನೇ ಕಾರಣ ಅಂದರೆ ನನಗೆ ಇವರು ಕಲಾವಿದರಾಗಿ ಬಹಳ ವಿಶಿಷ್ಟವಾಗಿ ಕಂಡು ಬರುತ್ತಾರೆ. ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಕಲಾಕೃತಿಗಳನ್ನು ರಚಿಸುತ್ತಾ ಬಂದಿದ್ದು ನಮಗೆಲ್ಲ ಒಂದು ಅಚ್ಚರಿ. ಯಾಕೆಂದರೆ ಕಲಾವಿದರೇ ನಿರಂತರವಾಗಿ ಕಲಾಕೃತಿಗಳನ್ನು ರಚಿಸುವುದು ಸಾಧ್ಯವಾಗದಿರುವಾಗ ತಮ್ಮ ಎಲ್ಲ ಕ್ಷೇತ್ರ ಗಳ ಒತ್ತಡದ ಕೆಲಸಗಳನ್ನು ಬದಿಗಿಟ್ಟು ಚಿತ್ರ ಕಲಾಕೃತಿಗಳನ್ನು ರಚಿಸುತ್ತಿದ್ದರು ಅನ್ನೋದೇ ಒಂದು ಸೋಜಿಗದ ವಿಷಯ. ನಾನು ಪ್ರತಿ ಸಲ ಅವರ ಮನೆಗೆ ಹೋದಾಗ ಹಲವಾರು ಹೊಸ ಹೊಸ ಕಲಾಕೃತಿಗಳನ್ನು ತೋರಿಸುತ್ತಿದ್ದರು. ಅದನ್ನು ನೋಡಿ ಎಷ್ಟೋ ಸಾರಿ ನಾನೇ ದಂಗಾಗಿದ್ದಾನೆ. ಅವರ ಕೃತಿಗಳನ್ನು ನೋಡಿದರೆ ಬಣ್ಣಗಳನ್ನು ಎಷ್ಟು ಪ್ರೀತಿಸುತ್ತಿದ್ದರು ಅನ್ನೋದು ಅರ್ಥವಾಗುತ್ತದೆ. ನನಗೆ ಅವರು ಯಾವಾಗಲೂ ಹೇಳುತ್ತಿದ್ದದ್ದು ಒಂದೇ ಮಾತು. ಅದು ನಾವು ಹೆಚ್ಚೆಚ್ಚು ನೋಡಬೇಕು, ಹೆಚ್ಚೆಚ್ಚು ಓದಬೇಕು ಮತ್ತು ಹೆಚ್ಚೆಚ್ಚು ಕೃತಿಗಳನ್ನು ಮಾಡಬೇಕು ಎಂದು. ಈ ಮಾತನ್ನು ಅವರು ಸಹ ಪರಿಪಾಲಿಸುತ್ತಿದ್ದರು. ಅಳವಡಿಸಿಕೊಂಡಿದ್ದರು.

  • ದಿಲೀಪ್‍ಕುಮಾರ್ ಕಾಳೆ ಕಲಾವಿದರು, ಬೆಳಗಾವಿ
ಕುಸನೂರ ಅವರನ್ನು ಸನ್ಮಾನಿಸಿದ ಕ್ಷಣ.

.


Share This

Leave a Reply

Your email address will not be published. Required fields are marked *